ಬೆಳಗಾವಿ : ನಿರ್ವಹಣೆಯ ಭಾರದಿಂದ ಜಿಂಕೆವನ ಮುಚ್ಚಲು ಹೊರಟಿರುವ ಬೈಲಹೊಂಗಲ ಸಮೀಪದ ಸುಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನದಲ್ಲಿರುವ ಅರಣ್ಯ ಇಲಾಖೆಯ ಕಿರು ಪ್ರಾಣಿ ಸಂಗ್ರಹಾಲಯದ ಜಿಂಕೆವನ ಮುಚ್ಚುವ ಬಗ್ಗೆ ಪ್ರವಾಸಿಗರ ತೀವ್ರ ವಿರೋಧ ವ್ಯಕ್ತವಾಗಿದೆ.
ಬೈಲಹೊಂಗಲ ಸಮೀಪದ ಸುಕ್ಷೇತ್ರ ಸೊಗಲ ಸೋಮೇಶ್ವರ ದೇವಸ್ಥಾನದಲ್ಲಿರುವ ಪ್ರವಾಸಿಗರ ಆಕರ್ಷಣೆಯ ಜಿಂಕೆವನ ನಿರ್ವಹಣೆಯ ಭಾರದಿಂದ ಅರಣ್ಯ ಇಲಾಖೆ ಮುಚ್ಚಲು ಹೊರಟಿರುವುದು ಸರಿಯಲ್ಲ. ಜಿಂಕೆವನಕ್ಕೆ ಪುನಶ್ಚೇತನ ಕಲ್ಪಿಸಿ ಉತ್ತಮವಾಗಿ ಮುಂದುವರೆಸಿಕೊಂಡು ಹೋಗಬೇಕೆಂದು ಪ್ರವಾಸಿಗರು ಒತ್ತಾಯಿಸಿದ್ದಾರೆ.
ಪ್ರಕೃತಿ ಸೌಂದರ್ಯದ ಮಡಿಲಲ್ಲಿ 1987 ರಲ್ಲಿ ಸ್ಥಾಪಿಸಲಾಗಿರುವ ಜಿಂಕೆವನದಲ್ಲಿ ಒಂದು ಕೃಷ್ಣಮೃಗ ಸೇರಿ 30 ಜಿಂಕೆಗಳು ಇವೆ. ಸರ್ಕಾರ ಇವುಗಳ ನಿರ್ವಣೆಗೆ ಬೇಕಾದ ಸವಲತ್ತು ಕಲ್ಪಿಸದೆ ನಿರ್ಲಕ್ಷ್ಯವಹಿಸಿದೆ.
ಕ್ಷೇತ್ರದ ಶಾಸಕ ಮಹಾಂತೇಶ ಕೌಜಲಗಿ ಅವರ ನಿರಂತರ ಶ್ರಮ, ಕಾಳಜಿಯಿಂದ ಇಷ್ಟು ವರ್ಷ ಹೇಗೋ ಜಿಂಕೆವನ ಮುನ್ನಡೆದಿತ್ತು. ಆದರೆ ಇತ್ತಿಚಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆಯೂ ಕಡಿಮೆ ಆಗಿದ್ದರಿಂದ ಜಿಂಕೆವನ ಮುಚ್ಚುವ ಪ್ರಕ್ರಿಯೆ ನಡೆದಿದೆ. ಇದನ್ನು ಕೈ ಬಿಟ್ಟು ಜಿಂಕೆವನಕ್ಕೆ ಅನುದಾನ ಒದಗಿಸಿ ಸರಿಯಾಗಿ ಮುನ್ನಡೆಸಿಕೊಂಡು ಹೋಗಬೇಕೆಂದು ಟ್ರಸ್ಟ್ ಅಧ್ಯಕ್ಷ ವೀರನಗೌಡ ಸಂಗನವರ ಹೇಳಿದ್ದಾರೆ.
ಜಿಂಕೆವನಕ್ಕೆ ಪುನಶ್ಚೇತನ ಹಾಗೂ ಅದೇ ಜಾಗದಲ್ಲಿ ಪಕ್ಷಿಧಾಮ ನಿರ್ಮಿಸುವ ಕುರಿತಂತೆ ಪರಿಶೀಲಿಸುವುದಾಗಿ ಅರಣ್ಯ, ವನ್ಯಜೀವಿ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೇ ಈಗಾಗಲೇ ತಿಳಿಸಿದ್ದಾರೆ ಎಂದು ಶಾಸಕ ಮಹಾಂತೇಶ ಕೌಜಲಗಿ ತಿಳಿಸಿದರು.


