ಬೆಳಗಾವಿ : ಉಡುಪಿಯ ಖಾಸಗಿ ಪ್ಯಾರ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣ ಅತ್ಯಂತ ಹೇಯ ಮತ್ತು ಖಂಡನೀಯವಾಗಿದೆ. ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಿ ತಪಿತಸ್ಥರ ಮೇಲೆ ಶಿಸ್ತು ಕಾನೂನು ಕ್ರಮ ಕೈಕೊಳ್ಳುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲ್ಲೂಕು ಘಟಕದ ಆಶ್ರಯದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಸೇರಿದ ವಿದ್ಯಾರ್ಥಿಗಳು ಬಜಾರ ರಸ್ತೆ, ರಾಯಣ್ಣ ವೃತ್ತ, ಮುರಗೋಡ ರಸ್ತೆ ಮಾರ್ಗವಾಗಿ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿದರು.
ರಾಯಣ್ಣ ವೃತ್ತದಲ್ಲಿ ರಸ್ತೆ ತಡೆದು, ಮಾನವ ಸರಪಳಿ ನಿರ್ಮಿಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.
ಎಬಿವಿಪಿ ಉತ್ತರ ಕರ್ನಾಟಕ ಪ್ರಾಂತ್ಯ ಪ್ರಮುಖ ಅಪ್ಪಣ್ಣ ಹಡಪದ ಮಾತನಾಡಿ, ‘ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿವಿಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಪೋಲಿಸ್ ಇಲಾಖೆ ಒತ್ತಡಕ್ಕೆ ಮಣಿದು ಘಟನೆ ಬಗ್ಗೆ ಸತ್ಯ ಸತ್ಯಾತೆ ಹೊರಬರದಂತೆ ತಡೆದಿದ್ದಾರೆ. ಇದರಿಂದ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಘಟನೆಯ ಹಿಂದೆ ಜಿಹಾದಿಗಳ ಕೈವಾಡವಿದ್ದು, ಈ ರೀತಿಯ ವಿಡಿಯೋಗಳನ್ನು ಚಿತ್ರೀಕರಿಸಿ ಹೆಣ್ಣು ಮಕ್ಕಳನ್ನು ಲವ್ ಜಿಹಾದ ಕೂಪಕ್ಕೆ ತಳ್ಳುವ ಹಂತಗಳು ನಡೆದಿವೆ. ಪ್ರಕರಣದ ಆರೋಪಿಗಳನ್ನು ಯಾವುದೇ ಒತ್ತಡಕ್ಕೆ ಮಣಿಯದೆ ಪೋಲಿಸ್ ಇಲಾಖೆ ಸೂಕ್ತ ರೀತಿ ತನಿಖೆಗೆ ಒಳಪಡಿಸಬೇಕು. ಈ ರೀತಿಯ ಘಟನೆ ಮರುಕಳಿಸದಂತೆ ಕ್ರಮ ಕೈಕೊಳ್ಳಬೇಕು’ ಎಂದು ಆಗ್ರಹಿಸಿದರು.
ವಿದ್ಯಾರ್ಥಿ ಪ್ರಮುಖ ಭರತ ಹುಲಮನಿ, ನಗರ ಕಾರ್ಯದರ್ಶಿ ಗಂಗಾಧರ ಕರೆಪ್ಪಗೋಳ, ಚೇತನ ಗಳಗಿ, ನಾಗರಾಜ ಕುರುಬರ, ಪ್ರದೀಪಗೌಡ ಪಾಟೀಲ, ಸುವರ್ಣಾ ಅಬ್ಬಾಯಿ, ಲಕ್ಷ್ಮೀ ಶೇರಖಂಡ, ಕಾವೇರಿ ತಾರಿಹಾಳ, ವಿವಿಧ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನೀಯರು ಉಪಸ್ಥಿತರಿದ್ದರು.


