ಬೆಳಗಾವಿ : ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ನೋಂದಣಿಗಾಗಿ ಹಣ ಸಂಗ್ರಹಿಸುತ್ತಿದ್ದ ಆನ್‌ಲೈನ್ ನೋಂದಣಿ ಕೇಂದ್ರಕ್ಕೆ ಶನಿವಾರ ಬೀಗ ಹಾಕಲಾಯಿತು. ಗೃಹ ಲಕ್ಷ್ಮಿ ಫಲಾನುಭವಿಗಳ ನೋಂದಣಿಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕ ದೂರಿನ ಮೇರೆಗೆ ಚವಾಟ್ ಗಲ್ಲಿಯಲ್ಲಿರುವ ಜನತಾ ಆನ್‌ಲೈನ್ ಕೇಂದ್ರದ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ನಾಗರಾಜ್, ಬೆಳಗಾವಿ ತಹಸೀಲ್ದಾರ್ ಸಿದ್ದರಾಯ ಬೋಸಗಿ, ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಜಂತ್ರಿ ಜನತಾ ಆನ್‌ಲೈನ್ ಕೇಂದ್ರದ ಮೇಲೆ ದಾಳಿ ನಡೆಸಿ ಅಕ್ರಮವನ್ನು ಪತ್ತೆ ಹಚ್ಚಿದ್ದಾರೆ. ಪ್ರತಿ ದಾಖಲಾತಿಗೆ 100 ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಹಾರೂಗೇರಿ ಪೊಲೀಸರು ಕೇಂದ್ರಕ್ಕೆ ಸೀಲ್ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಾದ ಬಳಿಕ ಕೇಂದ್ರಕ್ಕೆ ಬೀಗ ಜಡಿದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿರುವ ಮುತಗಾ ಗ್ರಾಮ ಒಂದು ಕೇಂದ್ರದ ಪರವಾನಿಗೆಯನ್ನೂ ಅಮಾನತುಗೊಳಿಸಲಾಗುವುದು ಎಂದು ಡಿಸಿ ನಿತೇಶ್ ಪಾಟೀಲ್ ತಿಳಿಸಿದರು.


