ಬಂಟ್ವಾಳ, ಜು.23: ಭಾನುವಾರ ಬೆಳಗ್ಗೆಯಿಂದ ನೇತ್ರಾವತಿ ನದಿಯ ನೀರಿನ ಮಟ್ಟ ನಿರಂತರವಾಗಿ ಏರಿಕೆಯಾಗಿದ್ದು, ಮಧ್ಯಾಹ್ನದ ವೇಳೆಗೆ ಎಂಟು ಮೀಟರ್ಗೆ ತಲುಪಿದೆ. ಇದರಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನದಿ ನೀರು ಅಪಾಯದ ಮಟ್ಟ ತಲುಪಿದೆ. ಪಾಣೆಮಂಗಳೂರು ಆಲಡ್ಕದಲ್ಲಿ 9 ಮನೆಗಳು ಜಲಾವೃತಗೊಂಡಿವೆ. ಶಾರದ ವಿದ್ಯಾಲಯದ ಆಟದ ಮೈದಾನಕ್ಕೂ ನೀರು ನುಗ್ಗಿದ್ದು, ಬೆಳೆದು ನಿಂತಿದ್ದ ಬೆಳೆಗಳು ಜಲಾವೃತಗೊಂಡಿದ್ದರಿಂದ ಅಡಿಕೆ ಬೆಳೆಗಾರರಿಗೂ ಅಪಾರ ನಷ್ಟ ಉಂಟಾಗಿದೆ. ಮಂಗಳೂರು ಎಸಿ ಡಾ ಹರ್ಷವರ್ಧನ್ ಮತ್ತು ಬಂಟ್ವಾಳ ತಹಶೀಲ್ದಾರ್ ಭಾನುವಾರ ಮಧ್ಯಾಹ್ನ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದರು. ಪಾಣೆಮಂಗಳೂರಿನ ಆಲಡ್ಕ, ಪಡ್ಪು ಬಿ ಮೂಡ ಗ್ರಾಮದ ಬಸ್ತಿಪಡ್ಪು, ಬಂಟ್ವಾಳದ ಮಣಿಹಳ್ಳ ಮತ್ತು ಮೈಂದಾಲ್ನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಮನವಿ ಮಾಡಿದರು. ಪಾಣೆಮಂಗಳೂರಿನ ಪುನರ್ವಸತಿ ಕೇಂದ್ರಗಳಿಗೂ ಭೇಟಿ ನೀಡಿದ್ದರು. ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್, ಕಂದಾಯ ನಿರೀಕ್ಷಕ ವಿಜಯ್, ಗ್ರಾ.ಪಂ.ಆಡಳಿತ ಅಧಿಕಾರಿ ಮಟ್ಟಿಹಳ್ಳಿ ಪ್ರಕಾಶ್, ಅಶ್ವಿನಿ, ಯಶೋಧ, ಸಂದೇಶ್ ಇದ್ದರು.


