ಬಂಟ್ವಾಳ : ಮನೆಯ ಮೇಲೆ ಗುಡ್ಡ ಕುಸಿದ ಪರಿಣಾಮ ಇಬ್ಬರು ಮಹಿಳೆಯರು ಮನೆಯೊಳಗೆ ಸಿಲುಕಿಕೊಂಡಿರುವ ಘಟನೆ ಸಜಿಪಮುನ್ನೂರು ಗ್ರಾಮದ ನಂದಾವರಗುಂಪು ಎಂಬಲ್ಲಿ ನಡೆದಿದೆ. ಓರ್ವ ಮಹಿಳೆಯನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಮಹಿಳೆಯನ್ನು ರಕ್ಷಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ನಂದಾವರ ನಿವಾಸಿ ಮಹಮ್ಮದ್ ಎಂಬವರ ಪತ್ನಿ ಜರೀನಾ (49) ಹಾಗೂ ಪುತ್ರಿ ಶಫಾ (20) ಅವಶೇಷಗಳಡಿ ಸಿಲುಕಿದ್ದಾರೆ. ತಕ್ಷಣ ಸಫಾಳನ್ನು ರಕ್ಷಿಸಲಾಗಿದ್ದು, ಜರೀನಾ ಶವವಾಗಿ ಪತ್ತೆಯಾಗಿದ್ದಾಳೆ.
ಬಂಟ್ವಾಳ ತಾಲೂಕಿನ ಹಲವೆಡೆ ಈ ರೀತಿಯ ಅವಘಡಗಳು ನಡೆಯುತ್ತಿವೆ ಎಂದು ವರದಿಯಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಕುಟುಂಬಸ್ಥರು ದೂರು ನೀಡಿದರೂ ಅಧಿಕಾರಿಗಳು ಕುಂಟು ನೆಪ ಹೇಳಿ ಜವಾಬ್ದಾರಿಯಿಂದ ದೂರ ಉಳಿಯುತ್ತಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ತಾಲೂಕಿನಲ್ಲಿ ಮನೆ, ಗುಡ್ಡಗಳು ಕುಸಿಯುವ ಸಾಧ್ಯತೆ ಹೆಚ್ಚು. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಅಭಿಪ್ರಾಯ.
ತಹಶೀಲ್ದಾರ್ ಎಸ್ ಬಿ ಕೂಡಲಗಿ ಅವರೊಂದಿಗೆ ಬಂಟ್ವಾಳ ಅಗ್ನಿಶಾಮಕ ದಳದ ಅಧಿಕಾರಿಗಳು, ಪೊಲೀಸರು ಹಾಗೂ ತಾಲೂಕು ಆಡಳಿತದ ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ.


