ಯಾದಗಿರಿ : ಸುರಪುರ ತಾಲೂಕಿನ ನಾಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಮೀಸಲಾತಿ ನಿಗದಿಯಾದ ಹಿನ್ನೆಲೆಯಲ್ಲಿ ಇಬ್ಬರು ಮಹಿಳಾ ಸದಸ್ಯರನ್ನು ಕಿಡ್ನಾಪ್ ಮಾಡಲಾಗಿದೆ. ನೀಲಗಂಗಮ್ಮ ಶಿವಣ್ಣ ಹಾಗೂ ಬೀಬಿ ಫಾತಿಮಾ ಸೋಫಿಸಾಬ್ ಅವರನ್ನು ಮೂವರು ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ. ನೀಲಗಂಗಮ್ಮ ಅವರ ಪತಿ ಶಿವಣ್ಣ ಅಪ್ಪಣ್ಣ ಹೊಸಳ್ಳಿ ಅವರು ಗ್ರಾಮಸ್ಥರಾದ ಮಹಾಂತಗೌಡ ಪೊಲೀಸ್ಪಾಟೀಲ, ಶರಣಪ್ಪ ಕೆಂಚಗೋಳ, ಆನಂದರೆಡ್ಡಿ ಕೆಂಚಗೋಳ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳೂ ಜಿ.ಪಂ.ಸದಸ್ಯರಾಗಿದ್ದು, ಈ ಹುದ್ದೆಗಳಿಗೆ ತೀವ್ರ ಪೈಪೋಟಿ ನಡೆಯುತ್ತಿರುವುದರಿಂದ ಇಬ್ಬರು ಅಧ್ಯಕ್ಷ-ಉಪಾಧ್ಯಕ್ಷರಾಗಲು ಯತ್ನಿಸುತ್ತಿದ್ದಾರೆ. ನಾಗನೂರು ಗ್ರಾಮ ಪಂಚಾಯಿತಿ ಒಟ್ಟು 19 ಸದಸ್ಯರ ಬಲ ಹೊಂದಿದ್ದು, ಎಲ್ಲರೂ ಕಾಂಗ್ರೆಸ್ ಬೆಂಬಲಿತರು. ಇದರಲ್ಲಿ 10 ಸದಸ್ಯರು ಮಹಿಳೆಯರು. ಗುರುವಾರ ಯಾದಗಿರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸುರಪುರ ಮತ್ತು ಹುಣಸಗಿ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಗೊಳಿಸಲಾಯಿತು. ನಾಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಈ ಬೆಳವಣಿಗೆಗಳ ನಂತರ ಇಬ್ಬರು ಮಹಿಳಾ ಸದಸ್ಯರನ್ನು ಅಪಹರಿಸಲಾಗಿದೆ ಎಂದು ಆರೋಪಿಸಲಾಗಿದೆ. ನಾಗನೂರು ಗ್ರಾಮ ಪಂಚಾಯಿತಿಯು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಪ್ರತಿನಿಧಿಸುವ ಶಹಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.


