ಕಡಬ : ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪದ ಅನಿಲ ಎಂಬಲ್ಲಿ ಗುರುವಾರ ತಡರಾತ್ರಿ ಕಾಡಾನೆಯೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ನುಗ್ಗಿ ವಾಹನಕ್ಕೆ ಹಾನಿ ಮಾಡಿದೆ. ಕೆಎಸ್‌ಆರ್‌ಟಿಸಿ ಸ್ಲೀಪರ್ ಬಸ್ ಪುತ್ತೂರು, ಸುಬ್ರಹ್ಮಣ್ಯ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು. ಆನಿಲ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಚಾಲಕ ನುಣುಚಿಕೊಳ್ಳಲು ಯತ್ನಿಸಿದರಾದರೂ, ಆನೆ ಬಸ್ಸಿನ ಎಡಭಾಗಕ್ಕೆ ನುಗ್ಗಿದೆ. ಚಲಿಸುತ್ತಿದ್ದ ದಾರಿಗೆ ಆನೆಯು ಅಡ್ಡ ಬಂದಿದೆ. ಆಗ ಬಸ್ಸನ್ನು ಕೆಲಹೊತ್ತು ನಿಲ್ಲಿಸಿ ಹೆಡ್ ಲೈಟ್ ಆಫ್ ಮಾಡಲಾಗಿದ್ದರೂ ಆನೆಯು ಬಸ್ಸಿನ ಸಮೀಪ ಬಂದು ತನ್ನ ದಂತದಿಂದ ಅದಕ್ಕೆ ತಿವಿದಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ಇದರಿಂದ ಪ್ರಯಾಣಿಕರು ಕೊಂಚ ಆತಂಕಗೊಂಡಿದ್ದರು. ಆದರೆ, ಯಾರಿಗೂ ಯಾವುದೇ ಹಾನಿಯಾಗಿಲ್ಲ. ಡ್ರೈವರ್ ಹಾಗೂ ಕಂಡಕ್ಟರ್ ಗಳೂ ಸೇಫ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಸ್ಸಿಗೆ ದಂತದಿಂದ ತಿವಿದ ಆನೆಯು ಕೆಲ ಹೊತ್ತು ಬಸ್ಸಿನ ಸುತ್ತಲೂ ಅಡ್ಡಾಡುತ್ತಿತ್ತು. ಆನಂತರ, ಅದು ರಸ್ತೆ ಪಕ್ಕದ ಅರಣ್ಯದೊಳಕ್ಕೆ ಹೋಯಿತು. ಆನಂತರ, ಬಸ್ಸಿನ ಸಿಬ್ಬಂದಿಯು ದಕ್ಷಿಣ ಕನ್ನಡ ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಬಸ್ಸನ್ನು ತಪಾಸಣೆ ನಡೆಸಿದರು. ಆನಂತರ, ಪ್ರಯಾಣಿಕರನ್ನು ವಿಚಾರಿಸಿ, ಯಾರಿಗೂ ತೊಂದರೆಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ. ಆನಂತರ ಬಸ್ಸು ತನ್ನ ಪ್ರಯಾಣವನ್ನು ಮುಂದುವರಿಸಿದೆ. ಬುದ್ದಿವಂತಿಕೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬಸ್‌ಗೆ ತೀವ್ರ ಹಾನಿಯಾಗಿದೆ. ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


