ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಹೆಚ್ಚುತ್ತಿರುವ ನೊಣಗಳ ಸಮಸ್ಯೆಯನ್ನು ತಕ್ಷಣ ಪರಿಹರಿಸಬೇಕು ಹಾಗೂ ಕೋಳಿ ಸಾಕಾಣಿಕೆ ರೈತರಿಗೆ ಕನಿಷ್ಠ ₹10 ಜಿಸಿ (GC) ದರ ನೀಡಬೇಕು ಎಂದು ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ (ರಿ.) ಆಗ್ರಹಿಸಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಅಧ್ಯಕ್ಷ ಸಯ್ಯದ್ ಹಸನ್ ರವರು ತಿಳಿಸಿದ್ದಾರೆ.
ಈ ಬಗ್ಗೆ ಒಕ್ಕೂಟವು, ಕೋಳಿ ಸಾಕಾಣಿಕೆ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪ್ರಸ್ತಾಪಿಸಿ ಕಂಪನಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ಕೋಳಿ ಫಾರಂಗಳ ನೊಣಗಳ ಸಮಸ್ಯೆಗೆ ಕಂಪನಿಗಳೇ ಹೊಣೆ!
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಕೋಳಿ ಸಾಕಾಣಿಕೆ ಕೇಂದ್ರಗಳಿಂದ ನೊಣಗಳ ಕಾಟ ಹೆಚ್ಚಾಗಿದ್ದು, ರೈತರ ಜೊತೆಗೆ ಸುತ್ತಮುತ್ತಲಿನ ಸಾರ್ವಜನಿಕರೂ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದಿದ್ದರೂ ಸಂಬಂಧಪಟ್ಟ ಕಂಪನಿಗಳು ಸಮಸ್ಯೆ ಪರಿಹಾರಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಒಕ್ಕೂಟ ಆರೋಪಿಸಿದೆ.
ಕೋಳಿ ಸಾಕಾಣಿಕೆ ರೈತರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಂತೆ ಕಂಪನಿಗಳೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸಾರ್ವಜನಿಕರ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ನೊಣಗಳ ಸಮಸ್ಯೆಯನ್ನು ತಕ್ಷಣ ನಿಯಂತ್ರಿಸಬೇಕು. ಇಲ್ಲದಿದ್ದರೆ ಕಂಪನಿಗಳ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಜಿಸಿ ದರ ಹೆಚ್ಚಳಕ್ಕೆ ನ.25ರ ಗಡುವು
ಕೋಳಿ ಸಾಕಾಣಿಕೆಗೆ ಅಗತ್ಯವಿರುವ ವಿದ್ಯುತ್, ಕಾರ್ಮಿಕರ ವೇತನ ಹಾಗೂ ನಿರ್ವಹಣಾ ವೆಚ್ಚ ನಿರಂತರವಾಗಿ ಹೆಚ್ಚಾಗುತ್ತಿದ್ದರೂ, ಇಂಟೆಗ್ರೇಶನ್ ಪದ್ಧತಿಯಲ್ಲಿ ಸಾಕಾಣಿಕೆ ಮಾಡುತ್ತಿರುವ ರೈತರಿಗೆ ಕಂಪನಿಗಳು ನೀಡುತ್ತಿರುವ ಜಿಸಿ ದರ ಸಮರ್ಪಕವಾಗಿಲ್ಲ ಎಂದು ಒಕ್ಕೂಟ ತಿಳಿಸಿದೆ.
ರೈತರಿಗೆ ಕನಿಷ್ಠ ₹10 ಜಿಸಿ ದರ ನೀಡುವಂತೆ ಸುಮಾರು ಆರು ತಿಂಗಳ ಹಿಂದೆಯೇ ಸರ್ಕಾರ ಕಂಪನಿಗಳಿಗೆ ಸೂಚನೆ ನೀಡಿದ್ದರೂ, ಹಲವು ಕಂಪನಿಗಳು ಇದನ್ನು ಜಾರಿಗೆ ತಂದಿಲ್ಲ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಮಿತಿ ಹಾಗೂ ಬೆಂಗಳೂರು ಗ್ರಾಮಾಂತರ ರಾಜ್ಯ ಸಮಿತಿಯು ಕಂಪನಿಗಳಿಗೆ ಒಂದು ವಾರದ ಗಡುವು ನೀಡಿದೆ.
ನ.25ರಿಂದ ಕೋಳಿ ಮರಿಗಳ ಸ್ವೀಕಾರ ಸ್ಥಗಿತಗೊಳಿಸುವ ಎಚ್ಚರಿಕೆ
ನವೆಂಬರ್ 25ರೊಳಗೆ ಜಿಸಿ ದರ ಹೆಚ್ಚಳದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ, ಅಂದಿನಿಂದ ಹೊಸ ಕೋಳಿ ಮರಿಗಳನ್ನು ಸಾಕಾಣಿಕೆ ಕೇಂದ್ರಗಳಿಗೆ ಸ್ವೀಕರಿಸದಿರುವುದು ಹಾಗೂ ಈಗಾಗಲೇ ಸಾಕಾಣಿಕೆಯಲ್ಲಿರುವ ಕೋಳಿಗಳನ್ನು ಮಾರಾಟಕ್ಕೆ ನೀಡದೆ ಹೋರಾಟ ನಡೆಸಲು ರಾಜ್ಯ ಸಮಿತಿ ನಿರ್ಧರಿಸಿದೆ. ಅಲ್ಲದೆ, ನವೆಂಬರ್ 25ರಂದು ಬೆಂಗಳೂರಿನಲ್ಲಿ ವಿಧಾನಸೌಧ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಹೋರಾಟಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮಸ್ತ ಕೋಳಿ ಸಾಕಾಣಿಕೆ ರೈತರ ಪರವಾಗಿ ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ ಸಂಪೂರ್ಣ ಬೆಂಬಲ ಘೋಷಿಸಿದೆ. ಜಿಲ್ಲೆಯ ಎಲ್ಲಾ ರೈತರು ಒಗ್ಗಟ್ಟಿನಿಂದ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದೆ.
ರೈತರ ಶ್ರಮಕ್ಕೆ ನ್ಯಾಯಯುತ ಬೆಲೆ ದೊರೆಯಬೇಕು, ರೈತರ ಬದುಕು ಉಳಿಯಬೇಕು ಹಾಗೂ ಕೋಳಿ ಸಾಕಾಣಿಕೆ ಉದ್ಯಮದಲ್ಲಿ ರೈತರಿಗೆ ಗೌರವಯುತ ಸ್ಥಾನಮಾನ ಸಿಗಬೇಕು ಎಂಬುದು ಒಕ್ಕೂಟದ ಪ್ರಮುಖ ಆಶಯವಾಗಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ ಅಶ್ವಿನ್ ಕುಮಾರ್ ಬಿ.ಕೆ. ಮತ್ತು ಕೋಶಾಧಿಕಾರಿ ಕೇಶವ ಕೊಯ್ದು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

