Monday, November 16, 2026
Homeಜಿಲ್ಲೆಮಂಗಳೂರು : ಗೋವಾ ಕರಾವಳಿಯಲ್ಲಿ ಕರ್ನಾಟಕದ ಮೀನುಗಾರರಿಗೆ ಸಂಕಷ್ಟ – ಲಕ್ಷಾಂತರ ರೂಪಾಯಿ ದಂಡ, ಮೀನುಗಳೂ...

ಮಂಗಳೂರು : ಗೋವಾ ಕರಾವಳಿಯಲ್ಲಿ ಕರ್ನಾಟಕದ ಮೀನುಗಾರರಿಗೆ ಸಂಕಷ್ಟ – ಲಕ್ಷಾಂತರ ರೂಪಾಯಿ ದಂಡ, ಮೀನುಗಳೂ ವಶಕ್ಕೆ..!

ಮಂಗಳೂರು : ಸಮುದ್ರ ಮೀನುಗಾರಿಕೆಗೆ ತೆರಳುವ ಕರ್ನಾಟಕದ ಮೀನುಗಾರರಿಗೆ ಇದೀಗ ಗೋವಾ ಕರಾವಳಿಯಲ್ಲೂ ಸಂಕಷ್ಟ ಎದುರಾಗಿದೆ. ಕೇರಳದ ಬಳಿಕ ಈಗ ಗೋವಾ ಗಡಿಯಲ್ಲಿಯೂ ರಾಜ್ಯದ ಮೀನುಗಾರರು ಕಿರುಕುಳ ಅನುಭವಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಕರ್ನಾಟಕದ ಮೀನುಗಾರಿಕಾ ಬೋಟ್‌ಗಳು ಗೋವಾ ಕರಾವಳಿ ಭಾಗದಲ್ಲಿ ಮೀನುಗಾರಿಕೆ ನಡೆಸುವ ವೇಳೆ ಗೋವಾ ಕರಾವಳಿ ರಕ್ಷಣಾ ಪಡೆಯ (CSP) ಅಧಿಕಾರಿಗಳು ಭಾರೀ ಪ್ರಮಾಣದ ದಂಡ ವಿಧಿಸುತ್ತಿದ್ದಾರೆ ಎಂದು ಮೀನುಗಾರರು ಆರೋಪಿಸಿದ್ದಾರೆ. ನಿಯಮದ ಪ್ರಕಾರ 12 ನಾಟಿಕಲ್ ಮೈಲು ವ್ಯಾಪ್ತಿಯಿಂದ ಹೊರಗೆ ಮೀನುಗಾರಿಕೆ ನಡೆಸುತ್ತಿದ್ದರೂ ಕರ್ನಾಟಕದ ಬೋಟ್‌ಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಲಾಗುತ್ತಿದೆ ಎನ್ನಲಾಗಿದೆ.

ಕರ್ನಾಟಕದ ಗಡಿ ದಾಟುತ್ತಿದ್ದಂತೆ ಲಕ್ಷಾಂತರ ರೂಪಾಯಿ ದಂಡ ವಿಧಿಸುವುದಲ್ಲದೆ, ಬೋಟ್‌ಗಳಲ್ಲಿ ಹಿಡಿದ ಮೀನುಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆಯುತ್ತಿದ್ದಾರೆ ಎಂಬ ಆರೋಪ ಮೀನುಗಾರರಿಂದ ಕೇಳಿಬಂದಿದೆ. ಈ ಕಾರ್ಯಾಚರಣೆಗೆ ಗೋವಾ ಪೊಲೀಸರಿಗೆ ಕೇರಳದ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೂ ಸಾಥ್ ನೀಡುತ್ತಿದ್ದಾರೆ ಎಂದು ಮೀನುಗಾರರು ದೂರಿದ್ದಾರೆ.

ಗೋವಾ ಅಧಿಕಾರಿಗಳ ಈ ನಡೆಗೆ ಮಂಗಳೂರಿನ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮೀನುಗಾರರ ಸಮಸ್ಯೆ ಕುರಿತು ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಹಾಗೂ ಮೀನುಗಾರಿಕಾ ಸಚಿವರು ಮೌನವಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಮಸ್ಯೆಯನ್ನು ಕೂಡಲೇ ಬಗೆಹರಿಸಲು ಸರ್ಕಾರ ಮಧ್ಯಪ್ರವೇಶಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮಂಗಳೂರಿನ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ.

ಇದೇ ಪರಿಸ್ಥಿತಿ ಮುಂದುವರಿದರೆ ಆಳ ಸಮುದ್ರದಲ್ಲಿ ಕರ್ನಾಟಕ, ಕೇರಳ ಹಾಗೂ ಗೋವಾ ಮೀನುಗಾರರ ನಡುವೆ ಸಂಘರ್ಷ ಉಂಟಾಗುವ ಆತಂಕವೂ ವ್ಯಕ್ತವಾಗಿದೆ.

ಕರ್ನಾಟಕದ ಮೀನುಗಾರರ ಹಿತ ಕಾಪಾಡಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಮೀನುಗಾರರ ಪ್ರಮುಖ ಆಗ್ರಹವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular