Wednesday, November 11, 2026
Homeಜಿಲ್ಲೆಕಾಸರಗೋಡು : 35 ವರ್ಷಗಳ ಗಣೇಶೋತ್ಸವಕ್ಕೆ ಕೋರ್ಟ್ ಕುತ್ತು? ಜೋಡುಕಲ್ಲಿನ ಗಣೇಶ ಚಪ್ಪರ ತೆರವಿಗೆ ಮುಸ್ಲಿಂ...

ಕಾಸರಗೋಡು : 35 ವರ್ಷಗಳ ಗಣೇಶೋತ್ಸವಕ್ಕೆ ಕೋರ್ಟ್ ಕುತ್ತು? ಜೋಡುಕಲ್ಲಿನ ಗಣೇಶ ಚಪ್ಪರ ತೆರವಿಗೆ ಮುಸ್ಲಿಂ ಲೀಗ್ ಮುಖಂಡನ ಅರ್ಜಿ; ಕಾಸರಗೋಡಿನಲ್ಲಿ ಕಿಚ್ಚು…!

ಕಾಸರಗೋಡು : ಮಂಜೇಶ್ವರ ತಾಲೂಕಿನ ಜೋಡುಕಲ್ಲಿನಲ್ಲಿ ಗಣೇಶೋತ್ಸವದ ಚಪ್ಪರ ತೆರವು ವಿಚಾರ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಬರೋಬ್ಬರಿ 35 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಳ್ಳಲು ಭಕ್ತರು ಹಾಗೂ ಹಿಂದೂ ಸಂಘಟನೆಗಳು ಹೋರಾಟಕ್ಕಿಳಿದಿದ್ದು, ಪ್ರದೇಶದಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ.

ಜೋಡುಕಲ್ಲಿನಲ್ಲಿ ಪ್ರತಿವರ್ಷ ಗಣೇಶೋತ್ಸವ, ಅಷ್ಟಮಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಚಪ್ಪರ ನಿರ್ಮಿಸಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಚಪ್ಪರ ನಿರ್ಮಾಣವಾಗಿರುವ ಜಾಗ ಲೋಕೋಪಯೋಗಿ ಇಲಾಖೆಗೆ ಸೇರಿದೆ ಎಂಬ ವಿಚಾರ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.

ಈ ಜಾಗದಲ್ಲಿ ಅನಧಿಕೃತವಾಗಿ ಚಪ್ಪರ ನಿರ್ಮಿಸಲಾಗಿದೆ ಎಂದು ಆರೋಪಿಸಿ ಮುಸ್ಲಿಂ ಲೀಗ್ ಮುಖಂಡರೊಬ್ಬರು ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಜಾಗ ತೆರವುಗೊಳಿಸುವಂತೆ ಸೂಚನೆ ನೀಡಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಚಪ್ಪರ ತೆರವುಗೊಳಿಸಲು ಮುಂದಾಗಿದ್ದಾರೆ.

ಅಧಿಕಾರಿಗಳ ತೆರವಿಗೆ ಭಕ್ತರ ತೀವ್ರ ವಿರೋಧ

ಮೂರುವರೆ ದಶಕಗಳಿಂದ ನಡೆದುಕೊಂಡು ಬರುತ್ತಿರುವ ಧಾರ್ಮಿಕ ಆಚರಣೆಗೆ ಈಗ ಅಡ್ಡಿ ಯಾಕೆ ಎಂಬ ಪ್ರಶ್ನೆಯೊಂದಿಗೆ ಭಕ್ತರು ಹಾಗೂ ಹಿಂದೂ ಸಂಘಟನೆಗಳು ಪ್ರತಿಭಟನೆ ಆರಂಭಿಸಿವೆ. ಯಾವುದೇ ಕಾರಣಕ್ಕೂ ಚಪ್ಪರ ತೆರವು ಮಾಡಬಾರದು, ಗಣೇಶೋತ್ಸವದ ಪರಂಪರೆ ಮುಂದುವರಿಯಬೇಕು ಎಂದು ಪಟ್ಟು ಹಿಡಿದಿವೆ.

ಕಳೆದ 14 ದಿನಗಳಿಂದ ಗಣೇಶನ ಸನ್ನಿಧಿಯಲ್ಲೇ ಭಜನೆ, ಹೋಮ ಸೇರಿದಂತೆ ನಿರಂತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪ್ರತಿಭಟನೆ ಮುಂದುವರಿಸಲಾಗಿದೆ. ಅಧಿಕಾರಿಗಳು ತೆರವು ಕಾರ್ಯಾಚರಣೆಗೆ ಮುಂದಾದಾಗಲೆಲ್ಲ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದಾಗಿ ತೆರವು ಕಾರ್ಯಾಚರಣೆ ನಡೆಸಲಾಗದೆ ಅಧಿಕಾರಿಗಳು ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕ ಕರಾವಳಿಯಲ್ಲೂ ಸದ್ದು ಮಾಡಿದ ವಿವಾದ

ಜೋಡುಕಲ್ಲಿನ ಈ ವಿವಾದ ಇದೀಗ ಕಾಸರಗೋಡಿಗೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕ ಕರಾವಳಿಯಲ್ಲೂ ರಾಜಕೀಯ ಹಾಗೂ ಧಾರ್ಮಿಕ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ನಾಯಕ ಸಿ.ಟಿ. ರವಿ, ಪ್ರತಾಪ್ ಸಿಂಹ, ಶಾಸಕ ಭರತ್ ಶೆಟ್ಟಿ ಸೇರಿದಂತೆ ಹಲವು ನಾಯಕರು ಈ ಬೆಳವಣಿಗೆಯ ಬಗ್ಗೆ ಗಮನ ಹರಿಸಿದ್ದಾರೆ.

ಇನ್ನು ಮೂರುವರೆ ದಶಕಗಳ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಳ್ಳಲು ಗಣೇಶ ಮಂದಿರ ಉಳಿಸಿ ಕ್ರಿಯಾ ಸಮಿತಿ ಕಾನೂನು ಹೋರಾಟಕ್ಕೂ ಮುಂದಾಗಿದೆ. ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಮಿತಿ ನಿರ್ಧರಿಸಿದೆ.

ಇತರ ಅನಧಿಕೃತ ಕಟ್ಟಡಗಳ ತೆರವಿನ ಬಗ್ಗೆಯೂ ಪ್ರಶ್ನೆ

ಇದೇ ವೇಳೆ ಪ್ರತಿಭಟನಾಕಾರರು ಸರ್ಕಾರಿ ಜಾಗದಲ್ಲಿರುವ ಇತರ ಅನಧಿಕೃತ ಕಟ್ಟಡಗಳ ತೆರವು ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಕಾಸರಗೋಡಿನ ಇತರ ಪ್ರದೇಶಗಳಲ್ಲಿರುವ ಧಾರ್ಮಿಕ ಹಾಗೂ ಸಂಘಟನೆಗಳಿಗೆ ಸಂಬಂಧಿಸಿದ ಅನಧಿಕೃತ ಕಟ್ಟಡಗಳ ವಿರುದ್ಧವೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆಯೇ? ಒಂದು ಕಟ್ಟಡದ ತೆರವಿಗೆ ಮಾತ್ರ ಇಷ್ಟೊಂದು ತರಾತುರಿ ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಒಂದೆಡೆ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾದ ಅನಿವಾರ್ಯತೆ, ಮತ್ತೊಂದೆಡೆ 35 ವರ್ಷಗಳ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಳ್ಳಲು ಭಕ್ತರ ಹೋರಾಟ. ಈ ಎರಡರ ನಡುವೆ ಜೋಡುಕಲ್ಲಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಕಾವೇರುತ್ತಿದೆ.

ಒಟ್ಟಿನಲ್ಲಿ, ಜೋಡುಕಲ್ಲಿನ ಗಣೇಶ ಚಪ್ಪರ ವಿವಾದ ಇದೀಗ ಧಾರ್ಮಿಕ ಪರಂಪರೆ, ಸರ್ಕಾರಿ ಜಾಗದ ಹಕ್ಕು ಮತ್ತು ಕಾನೂನಿನ ಅನುಷ್ಠಾನದ ನಡುವಿನ ಸಂಘರ್ಷವಾಗಿ ಮಾರ್ಪಟ್ಟಿದೆ. 35 ವರ್ಷಗಳ ಗಣೇಶೋತ್ಸವದ ಪರಂಪರೆ ಮುಂದುವರಿಯುತ್ತದೆಯೇ? ನ್ಯಾಯಾಲಯದ ಆದೇಶದಂತೆ ಚಪ್ಪರ ತೆರವಾಗುತ್ತದೆಯೇ? ಅಥವಾ ಮೇಲ್ಮನವಿ ಮೂಲಕ ಹೊಸ ತಿರುವು ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular