ಮೈಸೂರು : ಜಿಲ್ಲೆಯ ಹೆಡಿಯಾಲ ಭಾಗದಲ್ಲಿ ಮತ್ತೆ ಹುಲಿ ದಾಳಿ ನಡೆದಿದ್ದು, ಆದಿವಾಸಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.
ನಂಜನಗೂಡು ತಾಲೂಕಿನ ಡೋರನಕಟ್ಟೆ ಕಾಲೋನಿಯಲ್ಲಿ ಈ ಘಟನೆ ಸಂಭವಿಸಿದೆ.
ಮಾಚಮ್ಮ (45) ಎಂಬ ಮಹಿಳೆ ಜಮೀನಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಹುಲಿ, ಮಹಿಳೆಯನ್ನು ಕಾಡಿನೊಳಗೆ ಎಳೆದೊಯ್ದಿದೆ.
ಹುಲಿಯು ಮಹಿಳೆಯ ಮುಖ ಹಾಗೂ ಎದೆ ಭಾಗಕ್ಕೆ ಕಚ್ಚಿ ಕೊಂದಿದೆ ಎನ್ನಲಾಗಿದೆ. ಬಳಿಕ ನಂಜದೇವರ ಬೆಟ್ಟದ ಕಾಡಿನೊಳಗೆ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಮತ್ತೆ ಹುಲಿ ಆತಂಕ!
ಇದೇ ಪ್ರದೇಶದಲ್ಲಿ ಈ ಹಿಂದೆ ರೈತ ಶಿವಣ್ಣ ಎಂಬವರೂ ಹುಲಿ ದಾಳಿಗೆ ಬಲಿಯಾಗಿದ್ದರು. ಇದೀಗ ಮತ್ತೊಮ್ಮೆ ಹುಲಿ ದಾಳಿಗೆ ಮಹಿಳೆ ಮೃತಪಟ್ಟಿರುವುದರಿಂದ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆಮಾಡಿದೆ.
ಹುಲಿ ದಾಳಿಗಳನ್ನು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪದೇಪದೇ ಹುಲಿ ದಾಳಿ ನಡೆಯುತ್ತಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿರುವ ಗ್ರಾಮಸ್ಥರು, ಕೂಡಲೇ ಹುಲಿಯನ್ನು ಸೆರೆಹಿಡಿದು ಜನರ ಜೀವ ರಕ್ಷಿಸುವಂತೆ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

