ಮಂಗಳೂರು : ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ವಿಶೇಷ ತನಿಖಾ ತಂಡ (SIT) ಕಾರ್ಯಪ್ರವೃತ್ತವಾಗಿದ್ದು, ತನಿಖೆಯ ಮುಂದಿನ ಹಂತಗಳ ಕುರಿತು ಮಂಗಳೂರಿನ SIT ಕಚೇರಿಯಲ್ಲಿ ಮಹತ್ವದ ಸಭೆ ನಡೆದಿದೆ.
SIT ಮುಖ್ಯಸ್ಥ ಎನ್. ಶಶಿಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಕರಣದ ಮರುತನಿಖೆಯ ರೂಪುರೇಷೆ ಸಿದ್ಧಪಡಿಸುವ ಕುರಿತು ಚರ್ಚೆ ನಡೆಸಲಾಗಿದೆ. ತನಿಖೆಯ ವಿವಿಧ ಜವಾಬ್ದಾರಿಗಳನ್ನು ಅಧಿಕಾರಿಗಳಿಗೆ ಹಂಚಿಕೆ ಮಾಡಲಾಗಿದ್ದು, ದಾಖಲೆಗಳ ಪರಿಶೀಲನೆ, ಸಾಕ್ಷಿಗಳ ವಿಚಾರಣೆ ಹಾಗೂ ಫಾರೆನ್ಸಿಕ್ ವರದಿಗಳ ಅಧ್ಯಯನ ಸೇರಿದಂತೆ ಹಲವು ಕಾರ್ಯಗಳಿಗೆ ಪ್ರತ್ಯೇಕ ಜವಾಬ್ದಾರಿಗಳನ್ನು ನೀಡಲಾಗಿದೆ.
ಹಳೆಯ FIR ಆಧಾರದಲ್ಲೇ ಮರುತನಿಖೆ
ಸೌಜನ್ಯ ಪ್ರಕರಣದ ಮರುತನಿಖೆಗೆ ಪ್ರತ್ಯೇಕ FIR ದಾಖಲಿಸದೆ, 2012ರಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ Cr.No.250/2012 ಸಂಖ್ಯೆಯ FIR ಆಧಾರದಲ್ಲೇ ತನಿಖೆ ಮುಂದುವರಿಸಲು SIT ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಹಿಂದಿನ ತನಿಖೆಯ ಇತಿಹಾಸವನ್ನು ಪರಿಶೀಲಿಸುವ ನಿಟ್ಟಿನಲ್ಲಿ ಎಸಿಪಿ ಮನೋಜ್ ಅವರು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು SIT ಕಚೇರಿಗೆ ತಂದಿದ್ದಾರೆ. ಬೆಳ್ತಂಗಡಿ ಪೊಲೀಸರು, ಸಿಐಡಿ ಹಾಗೂ ಸಿಬಿಐ ನಡೆಸಿದ್ದ ಹಿಂದಿನ ತನಿಖೆಗಳ ದಾಖಲೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
ಅಧಿಕಾರಿಗಳ ಮಹತ್ವದ ಸಭೆ
SIT ಕಚೇರಿಯಲ್ಲಿ ನಡೆದ ಸಭೆಯಲ್ಲಿ ಐಪಿಎಸ್ ಅಧಿಕಾರಿಗಳಾದ ನಿಶಾ ಜೇಮ್ಸ್, ಲೋಕೇಶ್ ಜಗಲ್ಸಾರ್ ಹಾಗೂ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ. ತನಿಖೆಯ ವಿವಿಧ ಹಂತಗಳನ್ನು ಸಮನ್ವಯಗೊಳಿಸುವುದು ಮತ್ತು ಮುಂದಿನ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.
ಪ್ರಕರಣದ ಹಿಂದಿನ ತನಿಖೆ ನಡೆಸಿದ್ದ ಅಧಿಕಾರಿಗಳು ಸೇರಿದಂತೆ ಹಲವು ಮಂದಿಯನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ಸೌಜನ್ಯ ಅವರ ಪೋಷಕರು ಆರೋಪಿಸಿರುವ ವ್ಯಕ್ತಿಗಳ ವಿಚಾರಣೆಯ ಬಗ್ಗೆಯೂ ತನಿಖಾ ತಂಡ ರೂಪುರೇಷೆ ಸಿದ್ಧಪಡಿಸುತ್ತಿದೆ ಎಂದು ವರದಿಯಾಗಿದೆ.
ಬೆಳ್ತಂಗಡಿಗೆ ತೆರಳಲಿರುವ SIT ತಂಡ
ಮುಂದಿನ ಎರಡು ದಿನಗಳಲ್ಲಿ SIT ತಂಡ ಬೆಳ್ತಂಗಡಿ ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಈ ವೇಳೆ ಸೌಜನ್ಯ ಅವರ ಮನೆ ಮತ್ತು ಕೊಲೆ ನಡೆದ ಸ್ಥಳವನ್ನು ಪರಿಶೀಲಿಸುವ ಸಾಧ್ಯತೆಯಿದೆ.
ಸುಪ್ರೀಂ ಕೋರ್ಟ್ 90 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ತನಿಖೆಯ ಪ್ರಗತಿ ಹಾಗೂ ಕಾಲಮಿತಿಯೊಳಗೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು SITಗೆ ಮಹತ್ವದ ಸವಾಲಾಗಿದೆ.
ಸುಮಾರು 14 ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಇದೀಗ ಮತ್ತೆ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಹಿಂದಿನ ತನಿಖೆಯ ದಾಖಲೆಗಳು, ಸಾಕ್ಷ್ಯಗಳು ಹಾಗೂ ಹೊಸದಾಗಿ ಪರಿಶೀಲನೆಗೆ ಒಳಪಡಲಿರುವ ಅಂಶಗಳ ಆಧಾರದಲ್ಲಿ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

