Tuesday, October 13, 2026
Homeರಾಜ್ಯಹಾವೇರಿ : ಹಾವೇರಿಯಲ್ಲಿ ಬರದ ಬರೆ : ₹1.50 ಲಕ್ಷದ ಎತ್ತು ಈಗ ₹70 ಸಾವಿರಕ್ಕೆ...

ಹಾವೇರಿ : ಹಾವೇರಿಯಲ್ಲಿ ಬರದ ಬರೆ : ₹1.50 ಲಕ್ಷದ ಎತ್ತು ಈಗ ₹70 ಸಾವಿರಕ್ಕೆ ಮಾರಾಟ..!

ಹಾವೇರಿ : ಮಳೆ ಕೊರತೆ, ಬೆಳೆ ನಷ್ಟದ ಭೀತಿ ಹಾಗೂ ಮೇವಿನ ಅಭಾವದಿಂದಾಗಿ ರೈತರು ತಮ್ಮ ಜಾನುವಾರುಗಳನ್ನು ಸಾಕಲಾಗದೆ ಮಾರಾಟಕ್ಕೆ ಮುಂದಾಗಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ರೈತರ ಬೆನ್ನೆಲುಬಾಗಿರುವ ಎತ್ತುಗಳು ಸೇರಿದಂತೆ ಹಸು, ಎಮ್ಮೆಗಳನ್ನು ಅನಿವಾರ್ಯವಾಗಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಹಾವೇರಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಶೇ.52ರಷ್ಟು ಮಳೆ ಕೊರತೆಯಾಗಿದ್ದು, ಕೆರೆ, ಕಟ್ಟೆ, ಹಳ್ಳ-ಕೊಳ್ಳಗಳು ನೀರಿಲ್ಲದೆ ಬತ್ತಿಹೋಗಿವೆ. ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಹಸಿರು ಮೇವಿನ ಕೊರತೆ ಎದುರಾಗಿದೆ. ಈಗಾಗಲೇ ಬೆಳೆಗಳ ಇಳುವರಿ ಕುಸಿಯುವ ಆತಂಕದಲ್ಲಿರುವ ರೈತರಿಗೆ ಜಾನುವಾರುಗಳ ನಿರ್ವಹಣೆಯ ವೆಚ್ಚವೂ ಹೆಚ್ಚುವರಿ ಹೊರೆಯಾಗಿದೆ.

ಮೇವಿನ ಕೊರತೆ, ನಿರ್ವಹಣೆಯ ವೆಚ್ಚದ ಹೊರೆ

ಸಾಮಾನ್ಯವಾಗಿ ರೈತರು ತಮ್ಮ ಎತ್ತುಗಳನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಕೃಷಿ ಚಟುವಟಿಕೆಗಳಲ್ಲಿ ವರ್ಷವಿಡೀ ರೈತನೊಂದಿಗೆ ದುಡಿಯುವ ಜಾನುವಾರುಗಳು ಗ್ರಾಮೀಣ ಕೃಷಿ ವ್ಯವಸ್ಥೆಯ ಪ್ರಮುಖ ಭಾಗವಾಗಿವೆ. ಆದರೆ, ಈ ಬಾರಿ ಮಳೆ ಕೈಕೊಟ್ಟಿರುವುದರಿಂದ ಅವುಗಳಿಗೆ ಮೇವು ಮತ್ತು ನೀರು ಒದಗಿಸುವುದೇ ರೈತರಿಗೆ ಸವಾಲಾಗಿದೆ.

ಮೆಕ್ಕೆಜೋಳ, ಶೇಂಗಾ ಹಾಗೂ ಸೋಯಾಬಿನ್ ಬೆಳೆಗಳ ಸೊಪ್ಪನ್ನು ಜಾನುವಾರುಗಳಿಗೆ ನೀಡುತ್ತಿದ್ದರೂ, ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕ ಆಹಾರ ಲಭ್ಯವಾಗುತ್ತಿಲ್ಲ ಎಂಬ ಆತಂಕ ರೈತರಲ್ಲಿದೆ. ಒಂದೆಡೆ ಕೃಷಿಯಿಂದ ಆದಾಯ ಕಡಿಮೆಯಾಗುವ ಭೀತಿ, ಮತ್ತೊಂದೆಡೆ ಜಾನುವಾರುಗಳ ನಿರ್ವಹಣೆಗೆ ಪ್ರತಿನಿತ್ಯ ಹಣ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಕೆಲ ರೈತರು ಎತ್ತು, ಹಸು ಮತ್ತು ಎಮ್ಮೆಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ.

ಎತ್ತುಗಳ ಬೆಲೆ ಭಾರೀ ಇಳಿಕೆ

ಹಾವೇರಿ ಜಾನುವಾರು ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟಕ್ಕೆ ಬರುವ ಜಾನುವಾರುಗಳ ಸಂಖ್ಯೆ ಹೆಚ್ಚಾಗಿದ್ದರೆ, ಖರೀದಿದಾರರ ಸಂಖ್ಯೆ ಕಡಿಮೆಯಾಗಿದೆ. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಎತ್ತುಗಳನ್ನು ಖರೀದಿಸಲು ರೈತರು ಹಿಂದೇಟು ಹಾಕುತ್ತಿರುವುದರಿಂದ ಬೇಡಿಕೆ ಕುಸಿದಿದೆ. ಇದರ ಪರಿಣಾಮವಾಗಿ ಎತ್ತುಗಳ ಬೆಲೆಯೂ ಇಳಿಕೆಯಾಗಿದೆ.

ಮುಂಗಾರು ಆರಂಭದ ವೇಳೆಯಲ್ಲಿ ಸುಮಾರು ₹1.50 ಲಕ್ಷದವರೆಗೆ ಬೆಲೆ ಹೊಂದಿದ್ದ ಎತ್ತುಗಳನ್ನು ಈಗ ₹70 ಸಾವಿರದಿಂದ ₹1 ಲಕ್ಷದೊಳಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಅನ್ನದಾತರಿಗೆ ದ್ವಿಗುಣ ಸಂಕಷ್ಟ

ಮಳೆ ಕೊರತೆಯಿಂದ ಬೆಳೆಗಳ ಇಳುವರಿಯ ಬಗ್ಗೆ ಖಚಿತತೆ ಇಲ್ಲ. ಜಾನುವಾರುಗಳಿಗೆ ಮೇವು ಮತ್ತು ನೀರು ಒದಗಿಸುವುದೂ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ತಮ್ಮ ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿರುವುದು ರೈತರಿಗೆ ಮತ್ತೊಂದು ಆರ್ಥಿಕ ಹೊಡೆತವಾಗಿ ಪರಿಣಮಿಸಿದೆ.

ಮಳೆ ಕೊರತೆ, ಮೇವಿನ ಅಭಾವ ಹಾಗೂ ಜಾನುವಾರುಗಳ ಬೆಲೆ ಕುಸಿತದಿಂದ ಹಾವೇರಿ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular