ಮಂಗಳೂರು : ಮಂಗಳೂರಿಗೆ ಸಿಗಬೇಕಿದ್ದ ಪ್ರತ್ಯೇಕ ರೈಲ್ವೇ ವಿಭಾಗವನ್ನು ಮೈಸೂರಿಗೆ ನೀಡಿರುವುದಕ್ಕೆ ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ಮಂಗಳೂರನ್ನು ಆಡಳಿತಾತ್ಮಕವಾಗಿ ಬೇರ್ಪಡಿಸಿರುವುದನ್ನು ಸ್ವಾಗತಿಸುವುದಾಗಿ ಹೇಳಿದರು. ಆದರೆ ಮಂಗಳೂರಿಗೆ ಪ್ರತ್ಯೇಕ ವಿಭಾಗ ನೀಡದೆ ಮೈಸೂರಿಗೆ ನೀಡಿರುವ ನಿರ್ಧಾರವನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಮಂಗಳೂರು ಸೇರಿದಂತೆ ಕರಾವಳಿ ಭಾಗದಿಂದ ರೈಲ್ವೇ ಇಲಾಖೆಗೆ ವಾರ್ಷಿಕ ಸುಮಾರು ₹1,100 ಕೋಟಿ ಆದಾಯ ಬರುತ್ತಿದೆ. ಕೊಂಕಣ ರೈಲ್ವೇ, ಮಂಗಳೂರು–ಹಾಸನ ರೈಲು ಸಂಪರ್ಕ ಹಾಗೂ ಮಂಗಳೂರು ಬಂದರಿನಂತಹ ಪ್ರಮುಖ ಮೂಲಸೌಕರ್ಯಗಳಿದ್ದರೂ ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗ ನೀಡದಿರುವುದು ಅನ್ಯಾಯ ಎಂದು ಆರೋಪಿಸಿದರು.
ಕಳೆದ 10–15 ವರ್ಷಗಳಿಂದ ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗಕ್ಕಾಗಿ ಹೋರಾಟ ನಡೆಸಲಾಗುತ್ತಿದೆ. ಧರಣಿ, ರೈಲು ತಡೆ ಹಾಗೂ ಉಪವಾಸ ಸತ್ಯಾಗ್ರಹ ಸೇರಿದಂತೆ ಹಲವು ಹೋರಾಟಗಳು ನಡೆದಿವೆ. ಈ ವಿಚಾರ ಸಂಸತ್ತಿನಲ್ಲಿಯೂ ಚರ್ಚೆಯಾಗಿದೆ ಎಂದು ಅವರು ಹೇಳಿದರು.
“ನಾವು ಮೈಸೂರು ಅಥವಾ ಪಾಲಕ್ಕಾಡ್ ವಿರುದ್ಧವಲ್ಲ. ಮಂಗಳೂರಿನ ನ್ಯಾಯಯುತ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಈ ವಿಚಾರ ಮುಂದಿನ ದಿನಗಳಲ್ಲಿ ಚುನಾವಣೆಯ ಪ್ರಮುಖ ವಿಷಯವಾಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು,” ಎಂದು ಪಿ.ವಿ. ಮೋಹನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಶುಭೋದಯ ಆಳ್ವ, ಹೊನ್ನಯ್ಯ, ಟಿ.ಕೆ. ಸುಧೀರ್, ನವಾಜ್ ಮತ್ತಿತರರು ಉಪಸ್ಥಿತರಿದ್ದರು.

