ತ್ರಿಶೂರ್ : ಕೇರಳದ ತ್ರಿಶೂರ್ ಜಿಲ್ಲೆಯ ಕೈಪ್ಪಮಂಗಲಂ ಸಮೀಪ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಿಂಡಿಗಲ್ ಮೂಲದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ 8 ಮಂದಿ ಮೃತಪಟ್ಟಿದ್ದಾರೆ.
ಕೈಪ್ಪಮಂಗಲಂನ ಪನಂಬಿಕ್ಕುನ್ನಂ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಾತ್ರಿ ಸುಮಾರು 11.40ರಿಂದ 11.50ರ ವೇಳೆಗೆ ಅಪಘಾತ ಸಂಭವಿಸಿದೆ. ತಮಿಳುನಾಡು ನೋಂದಣಿಯ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಸರಕು ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ವರದಿಗಳ ಪ್ರಕಾರ, ಕಾರಿನಲ್ಲಿದ್ದ ಏಳು ಮಂದಿ ದಿಂಡಿಗಲ್‌ನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಮತ್ತೊಬ್ಬರು ಚಾಲಕರಾಗಿದ್ದರು.
ಡಿಕ್ಕಿಯ ಪರಿಣಾಮ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಕಾರಿನ ಅವಶೇಷಗಳೊಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು.
ಅಪಘಾತದ ಸ್ಥಳದಲ್ಲಿ ದಿಂಡಿಗಲ್‌ನ PSNA ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿಯ ಗುರುತಿನ ಚೀಟಿ ಪತ್ತೆಯಾಗಿರುವುದರಿಂದ ಮೃತರು ತಮಿಳುನಾಡಿನ ಕಾಲೇಜು ವಿದ್ಯಾರ್ಥಿಗಳೆಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ.
ಮೃತದೇಹಗಳನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ ಸಂಭವಿಸಿದ ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಬದಿಯಲ್ಲಿ ಮೂರು ಲಾರಿಗಳು ನಿಂತಿದ್ದವು ಎಂದು ವರದಿಯಾಗಿದೆ.
ಸ್ಥಳದಲ್ಲಿ ಬೆಳಕಿನ ಕೊರತೆ ಹಾಗೂ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳ ಕೊರತೆಯೂ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆ ಕುರಿತು ಕೈಪ್ಪಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಅತಿವೇಗ, ರಸ್ತೆ ಕಾಮಗಾರಿ ಪ್ರದೇಶದಲ್ಲಿನ ಸುರಕ್ಷತಾ ವ್ಯವಸ್ಥೆ ಹಾಗೂ ನಿಲ್ಲಿಸಿದ್ದ ಲಾರಿಯ ಸ್ಥಿತಿ ಸೇರಿದಂತೆ ವಿವಿಧ ಅಂಶಗಳನ್ನು ತನಿಖೆ ಮಾಡಲಾಗುತ್ತಿದೆ.

