ಕಠ್ಮಂಡು : ನೇಪಾಲದಲ್ಲಿ ಸಂಭವಿಸಿದ ಭೀಕರ ಭೂಸುನಾಮಿ ಹಾಗೂ ಪ್ರವಾಹದ ಬಳಿಕ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ. ದುರಂತದಲ್ಲಿ ಸಾವಿನ ಸಂಖ್ಯೆ 903ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ, ಬರೋಬ್ಬರಿ 4,247 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.
ದಿನಗಳು ಕಳೆದಂತೆ ನಾಪತ್ತೆಯಾದವರನ್ನು ಜೀವಂತವಾಗಿ ಪತ್ತೆ ಮಾಡುವ ಸಾಧ್ಯತೆ ಕ್ಷೀಣಿಸುತ್ತಿದೆ. ಈವರೆಗೆ ಪ್ರವಾಹ ಪೀಡಿತ ಪ್ರದೇಶಗಳಿಂದ ಸುಮಾರು 9,500 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಿತರಲ್ಲಿ ನೇಪಾಲದ ನಾಗರಿಕರ ಜೊತೆಗೆ ಭಾರತ ಸೇರಿದಂತೆ ಹಲವು ದೇಶಗಳ ಪ್ರವಾಸಿಗರೂ ಸೇರಿದ್ದಾರೆ.
ಇನ್ನು ಜಲವಿದ್ಯುತ್ ಯೋಜನೆಗಳಲ್ಲಿದ್ದ 933 ಕಾರ್ಮಿಕರು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಇವರಲ್ಲಿ 600ಕ್ಕೂ ಹೆಚ್ಚು ಮಂದಿ ಸುರಂಗಗಳೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಥರ್ಮಲ್ ಡ್ರೋನ್ಗಳ ಮೂಲಕ ಸುರಂಗಗಳಲ್ಲಿ ಜೀವಂತಿಕೆ ಪತ್ತೆಹಚ್ಚಲು ಪ್ರಯತ್ನ ನಡೆಸಲಾಗಿದೆ. ಆದರೆ ಈವರೆಗೆ ಯಾವುದೇ ಚಲನವಲನ ಪತ್ತೆಯಾಗಿಲ್ಲ. ಈ ನಡುವೆ ರಕ್ಷಣಾ ಕಾರ್ಯಕ್ಕೆ ಉಪಕರಣಗಳ ಕೊರತೆ ದೊಡ್ಡ ಸವಾಲಾಗಿದೆ. ಥರ್ಮಲ್ ಕ್ಯಾಮೆರಾ, ಜೀವಂತಿಕೆ ಪತ್ತೆಹಚ್ಚುವ ಸಾಧನ, ಹಗ್ಗಗಳು, ಬಾಡಿ ಬ್ಯಾಗ್ಗಳು ಹಾಗೂ ಅತ್ಯಾಧುನಿಕ ಹೆಲಿಕಾಪ್ಟರ್ಗಳ ಕೊರತೆ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಈವರೆಗೆ ವಿವಿಧ ಜಲವಿದ್ಯುತ್ ಸುರಂಗಗಳಿಂದ 279 ಕಾರ್ಮಿಕರನ್ನು ರಕ್ಷಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಗೆ ಭಾರತ ಮತ್ತು ಚೀನಾ ಕೂಡ ನೇಪಾಲದ ಪಡೆಗಳಿಗೆ ನೆರವು ನೀಡುತ್ತಿವೆ. ಭಾರತದ 19 ಸದಸ್ಯರ ಫೊರೆನ್ಸಿಕ್ ತಂಡ ಕಠ್ಮಂಡುವಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸಾಮಾನ್ಯವಾಗಿ ಇಂತಹ ದುರಂತಗಳಲ್ಲಿ ಮೊದಲ 7ರಿಂದ 10 ದಿನಗಳು ಜೀವಂತವಾಗಿ ಸಿಲುಕಿರುವವರ ಪತ್ತೆಗೆ ನಿರ್ಣಾಯಕವಾಗಿರುತ್ತವೆ. ಆದರೆ ದುರ್ಗಮ ಪ್ರದೇಶಗಳು ಮತ್ತು ಪ್ರತಿಕೂಲ ಪರಿಸ್ಥಿತಿಗಳಿಂದಾಗಿ ಶೋಧ ಕಾರ್ಯಾಚರಣೆ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆ ಇದೆ.

