ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಇನ್ನು ಮುಂದೆ ಕಸವನ್ನು ಮೂಲದಲ್ಲೇ ನಾಲ್ಕು ವಿಧಗಳಾಗಿ ವಿಂಗಡಿಸಿ ನೀಡುವುದು ಕಡ್ಡಾಯವಾಗಿದೆ. ಸಾರ್ವಜನಿಕರು ಹಾಗೂ ಎಲ್ಲಾ ಘನತ್ಯಾಜ್ಯ ಉತ್ಪಾದಕರು ಪಾಲಿಕೆಯ ಕಸ ಸಂಗ್ರಹಣಾ ವಾಹನಗಳಿಗೆ ವಿಂಗಡಿಸಿದ ತ್ಯಾಜ್ಯವನ್ನೇ ಹಸ್ತಾಂತರಿಸಬೇಕು ಎಂದು ಮಹಾನಗರಪಾಲಿಕೆ ಸೂಚಿಸಿದೆ.
ಯಾವ ಕಸವನ್ನು ಹೇಗೆ ವಿಂಗಡಿಸಬೇಕು?
- ಹಸಿ ತ್ಯಾಜ್ಯ : ಅಡುಗೆ ಮನೆಯ ತ್ಯಾಜ್ಯ, ಹಣ್ಣು-ತರಕಾರಿ ಸಿಪ್ಪೆಗಳು, ಉಳಿದ ಆಹಾರ, ಮಾಂಸದ ತ್ಯಾಜ್ಯ, ಮೊಟ್ಟೆಯ ಕವಚ, ಹೂವು, ಎಲೆಗಳು ಸೇರಿದಂತೆ ಕೊಳೆಯುವ ತ್ಯಾಜ್ಯ. ಪ್ರತಿದಿನ ಸಂಗ್ರಹಿಸಲಾಗುತ್ತದೆ.
ಒಣ ತ್ಯಾಜ್ಯ : ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಕಾಗದ, ಪೇಪರ್, ಕಾರ್ಡ್ಬೋರ್ಡ್, ರಬ್ಬರ್ ಮುಂತಾದ ತ್ಯಾಜ್ಯ. ಪ್ರತಿ ಶುಕ್ರವಾರ ಮಾತ್ರ ಸಂಗ್ರಹಿಸಲಾಗುತ್ತದೆ.
- ನೈರ್ಮಲ್ಯ ತ್ಯಾಜ್ಯ : ಬಳಸಿದ ಸ್ಯಾನಿಟರಿ ಪ್ಯಾಡ್ಗಳು, ಡೈಪರ್ಗಳು, ಬ್ಯಾಂಡೇಜ್ಗಳು, ಕಾಂಡೋಮ್ಗಳು ಮುಂತಾದವು. ಪ್ರತಿದಿನ ಸಂಗ್ರಹಿಸಲಾಗುತ್ತದೆ.
- ವಿಶೇಷ ಕಾಳಜಿ ತ್ಯಾಜ್ಯ : ಹಳೆಯ ಬ್ಯಾಟರಿಗಳು, ಎಲ್ಇಡಿ ಬಲ್ಬ್ಗಳು, ಟ್ಯೂಬ್ಲೈಟ್ಗಳು, ಪೇಂಟ್ ಡಬ್ಬಿಗಳು, ಕೀಟನಾಶಕಗಳ ಬಾಟಲಿಗಳು, ಥರ್ಮಾಮೀಟರ್ಗಳು ಸೇರಿದಂತೆ ಅಪಾಯಕಾರಿ ತ್ಯಾಜ್ಯ. ಪ್ರತಿ ಶುಕ್ರವಾರ ಮಾತ್ರ ಸಂಗ್ರಹಿಸಲಾಗುತ್ತದೆ.
ಒಂದು ತಿಂಗಳ ಕಾಲಾವಕಾಶ : ತ್ಯಾಜ್ಯವನ್ನು ಮೂಲದಲ್ಲೇ ಸಂಪೂರ್ಣವಾಗಿ ವಿಂಗಡಿಸಿ ಪಾಲಿಕೆಯ ಕಸ ಸಂಗ್ರಹಣಾ ವಾಹನಗಳಿಗೆ ಹಸ್ತಾಂತರಿಸಲು ಸಾರ್ವಜನಿಕರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ.
ಒಂದು ತಿಂಗಳ ಬಳಿಕ ಮೂಲದಲ್ಲೇ ವಿಂಗಡಿಸಿದ ತ್ಯಾಜ್ಯವನ್ನು ಮಾತ್ರ ಪಾಲಿಕೆ ಸಂಗ್ರಹಿಸಲಿದೆ. ವಿಂಗಡಿಸದೆ ನೀಡುವ ತ್ಯಾಜ್ಯವನ್ನು ಸ್ಥಳದಲ್ಲೇ ತಿರಸ್ಕರಿಸಲಾಗುತ್ತದೆ.
ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಮಂಗಳೂರು ಮಹಾನಗರಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಉಪನಿಯಮಗಳು–2019ರ ಅನ್ವಯ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಎಚ್ಚರಿಸಿದೆ.
ನಗರದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ನಾಗರಿಕರು ತ್ಯಾಜ್ಯವನ್ನು ನಾಲ್ಕು ವಿಧಗಳಾಗಿ ವಿಂಗಡಿಸಿ ನೀಡುವ ಮೂಲಕ ಸಹಕರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

