ಕಠ್ಮಂಡು : ನೇಪಾಳದಲ್ಲಿ ಭೀಕರ ನೈಸರ್ಗಿಕ ವಿಕೋಪ ಸಂಭವಿಸಿದ್ದು, ಸುಮಾರು 5,200 ಮೀಟರ್ ಎತ್ತರದಲ್ಲಿದ್ದ ನೀರ್ಗಲ್ಲಿನ ಬೃಹತ್ ಭಾಗ ಕುಸಿದು ಹಠಾತ್ ಪ್ರವಾಹ ಉಂಟಾಗಿದೆ. ನೀರ್ಗಲ್ಲು ಕುಸಿತದಿಂದ ನದಿಗೆ ಅಡ್ಡಲಾಗಿ ನಿರ್ಮಾಣವಾಗಿದ್ದ ನೈಸರ್ಗಿಕ ಅಣೆಕಟ್ಟು ಒಡೆದು ನೀರು, ಮಣ್ಣು ಹಾಗೂ ಭಾರೀ ಹಿಮಗಡ್ಡೆಗಳು ಕೆಳಭಾಗಕ್ಕೆ ರಭಸದಿಂದ ಹರಿದಿವೆ.
ಸುಮಾರು 0.2 ಚದರ ಕಿ.ಮೀ. ವಿಸ್ತೀರ್ಣದ ನೀರ್ಗಲ್ಲು ಕುಸಿತ ಸಂಭವಿಸಿದ್ದು, ಇದರ ಪರಿಣಾಮ ನೇಪಾಳ–ಟಿಬೆಟ್ ಗಡಿ ಪ್ರದೇಶದಿಂದ ಸುಮಾರು 170 ಕಿ.ಮೀ. ವ್ಯಾಪ್ತಿಯಲ್ಲಿ ಭಾರೀ ವಿನಾಶ ಉಂಟಾಗಿದೆ ಎಂದು ವರದಿಯಾಗಿದೆ.
ಹಲವು ಜಿಲ್ಲೆಗಳಲ್ಲಿ ಭಾರೀ ಹಾನಿ ಭೋಟಿಕೋಶಿ ನದಿಯ ಮೇಲ್ಭಾಗದಲ್ಲಿರುವ ಲಾಂಗ್‌ಟಾಂಗ್ ಲಿರುಂಗ್ ಶಿಖರದ ಸಮೀಪ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಪ್ರವಾಹದ ಪರಿಣಾಮ ನೇಪಾಳದ ರಸುವಾ, ನುವಾಕೋಟ್, ಧಾಡಿಂಗ್ ಮತ್ತು ಚಿತ್ವಾನ್ ಜಿಲ್ಲೆಗಳಲ್ಲಿ ಭಾರೀ ಹಾನಿಯಾಗಿದೆ. ತ್ರಿಶೂಲಿ ನದಿಯ ಕೆಳಭಾಗದಲ್ಲಿರುವ ಪ್ರದೇಶಗಳಲ್ಲಿ ಕೆಲವೇ ನಿಮಿಷಗಳಲ್ಲಿ ನೀರಿನ ಮಟ್ಟ ಹಲವು ಮೀಟರ್‌ಗಳಷ್ಟು ಏರಿಕೆಯಾಗಿದೆ.
ವಿಜ್ಞಾನಿಗಳ ಪ್ರಕಾರ, ನೀರ್ಗಲ್ಲಿನ ಕೆಳಭಾಗದಲ್ಲಿದ್ದ ಶಿಲಾಪದರಗಳೂ ಕುಸಿದ ಪರಿಣಾಮ ಅಪಾರ ಪ್ರಮಾಣದ ಮಂಜುಗಡ್ಡೆ ಕೆಳಭಾಗಕ್ಕೆ ಜಾರಿದೆ. ಇದರಿಂದ ನೈಸರ್ಗಿಕ ಅಣೆಕಟ್ಟು ಒಡೆದು ಪ್ರವಾಹದ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. ಸಾವಿನ ಸಂಖ್ಯೆ 579ಕ್ಕೆ ಏರಿಕೆ ವಿನಾಶಕಾರಿ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 579ಕ್ಕೆ ಏರಿಕೆಯಾಗಿದೆ. 2,000ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 14,000 ರಕ್ಷಣಾ ಸಿಬ್ಬಂದಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಈವರೆಗೆ 3,742 ಮಂದಿಯನ್ನು ರಕ್ಷಿಸಲಾಗಿದೆ. ಪ್ರವಾಹದಲ್ಲಿ ಕೊಚ್ಚಿಹೋದ ಮೃತದೇಹಗಳು ದೂರದ ಪ್ರದೇಶಗಳಲ್ಲೂ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ನೇಪಾಳದ ಹಲವು ಆಸ್ಪತ್ರೆಗಳ ಶವಾಗಾರಗಳು ಭರ್ತಿಯಾಗಿವೆ.
ಮೃತದೇಹಗಳನ್ನು ಸುರಕ್ಷಿತವಾಗಿ ಇರಿಸಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತಿದೆ. ಗಡಿಯಲ್ಲಿ 16 ಕಿ.ಮೀ. ಸರಕು ವಾಹನಗಳ ಸಾಲು ಪ್ರವಾಹದಿಂದ ನೇಪಾಳದ ಪ್ರಮುಖ ರಸ್ತೆಗಳು ಹಾನಿಗೊಳಗಾಗಿರುವುದರಿಂದ ಭಾರತ–ನೇಪಾಳ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ. ಉತ್ತರ ಪ್ರದೇಶದ ಮಹಾರಾಜಗಂಜ್ ಗಡಿ ಪ್ರದೇಶದಲ್ಲಿ ನೇಪಾಳ ಪ್ರವೇಶಕ್ಕಾಗಿ ಸುಮಾರು 16 ಕಿ.ಮೀ. ಉದ್ದದ ಸರಕು ವಾಹನಗಳ ಸಾಲು ನಿರ್ಮಾಣವಾಗಿದೆ.
ಐದು ತಿಂಗಳ ಹಿಂದೆಯೇ ಎಚ್ಚರಿಕೆ : ಈ ದುರಂತ ಸಂಭವಿಸುವ ಸುಮಾರು ಐದು ತಿಂಗಳ ಹಿಂದೆಯೇ ಹಿಮಾಲಯ ಪ್ರದೇಶದಲ್ಲಿನ ಹಿಮನದಿಗಳ ವೇಗದ ಕರಗುವಿಕೆ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. 2000ರಿಂದ ಹಿಮ ಕರಗುವಿಕೆಯ ಪ್ರಮಾಣ ದ್ವಿಗುಣಗೊಂಡಿದ್ದು, 1975ರಿಂದ ಹಿಮದ ದಪ್ಪದಲ್ಲಿ ಸುಮಾರು 27 ಮೀಟರ್ ಕುಸಿತವಾಗಿದೆ ಎಂದು ವರದಿಗಳು ತಿಳಿಸಿವೆ.
ಹಿಮನದಿ ಕುಸಿತದ ದೃಶ್ಯ ಕ್ಯಾಮೆರಾದಲ್ಲಿ ನೇಪಾಳದ ಪ್ರವಾಹಕ್ಕೆ ಕಾರಣವಾದ ಹಿಮನದಿ ಕುಸಿತದ ದೃಶ್ಯವನ್ನು ಚೀನಾದ ಛಾಯಾಗ್ರಾಹಕರೊಬ್ಬರು ಆಕಸ್ಮಿಕವಾಗಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ವಿದೇಶಿ ರಕ್ಷಣಾ ನೆರವು ತಿರಸ್ಕಾರ : ಭಾರತ, ಚೀನಾ, ಬ್ರಿಟನ್ ಹಾಗೂ ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳು ತಮ್ಮ ವಿಪತ್ತು ನಿರ್ವಹಣಾ ಪಡೆಗಳನ್ನು ಕಳುಹಿಸಲು ಸಿದ್ಧವಾಗಿದ್ದರೂ ನೇಪಾಳ ಈ ನೆರವನ್ನು ತಿರಸ್ಕರಿಸಿದೆ ಎಂದು ವರದಿಯಾಗಿದೆ. 2015ರ ಭೂಕಂಪದ ವೇಳೆ ವಿದೇಶಿ ರಕ್ಷಣಾ ತಂಡಗಳ ಆಗಮನದಿಂದ ಉಂಟಾದ ಸಮನ್ವಯ ಮತ್ತು ವ್ಯವಸ್ಥಾಪನಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

