Sunday, August 23, 2026
Homeರಾಜ್ಯಹಾಸನ : ಆಟವಾಡುತ್ತಿದ್ದ 3 ವರ್ಷದ ಮಗನನ್ನು ರಕ್ಷಿಸಲು ಹೋಗಿ ತಂದೆಯೇ ಬಲಿ..!

ಹಾಸನ : ಆಟವಾಡುತ್ತಿದ್ದ 3 ವರ್ಷದ ಮಗನನ್ನು ರಕ್ಷಿಸಲು ಹೋಗಿ ತಂದೆಯೇ ಬಲಿ..!

ಹಾಸನ : ಮೂರು ವರ್ಷದ ಮಗನನ್ನು ಟ್ರ್ಯಾಕ್ಟರ್ ಮೇಲೆ ಕೂರಿಸಿ ಆಟವಾಡಿಸುತ್ತಿದ್ದ ವೇಳೆ ಸಂಭವಿಸಿದ ಆಕಸ್ಮಿಕ ದುರ್ಘಟನೆಯಲ್ಲಿ ತಂದೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಹೊಳೆನರಸೀಪುರದಲ್ಲಿ ನಡೆದಿದೆ.

ಮೃತರನ್ನು ಹೊಳೆನರಸೀಪುರದ ಕೋಟೆ ವಕ್ಕಲಿಗರ ಬೀದಿ ನಿವಾಸಿ, ಅರಕಲಗೂಡು ಕೆಎಸ್‌ಆರ್‌ಟಿಸಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯಶ್ವಂತ್ (37) ಎಂದು ಗುರುತಿಸಲಾಗಿದೆ.

ಯಶ್ವಂತ್ ಅವರು ಮನೆ ನಿರ್ಮಾಣಕ್ಕಾಗಿ ಸೆಂಟ್ರಿಂಗ್ ಸಾಮಗ್ರಿಗಳನ್ನು ಟ್ರ್ಯಾಕ್ಟರ್‌ನಲ್ಲಿ ತರಿಸಿದ್ದರು. ಈ ವೇಳೆ ತಮ್ಮ ಮೂರು ವರ್ಷದ ಮಗನನ್ನು ಟ್ರ್ಯಾಕ್ಟರ್ ಮೇಲೆ ಕೂರಿಸಿ ಆಟವಾಡಿಸುತ್ತಿದ್ದರು ಎನ್ನಲಾಗಿದೆ. ಆಗ ಮಗು ಆಕಸ್ಮಿಕವಾಗಿ ಟ್ರ್ಯಾಕ್ಟರ್‌ನ ಕೀ ಆನ್ ಮಾಡಿದೆ. ಪರಿಣಾಮ ಟ್ರ್ಯಾಕ್ಟರ್ ಏಕಾಏಕಿ ಮುಂದಕ್ಕೆ ಚಲಿಸಿದೆ. ಮಗು ಕೆಳಗೆ ಬೀಳುವುದನ್ನು ತಪ್ಪಿಸಲು ಯಶ್ವಂತ್ ಯತ್ನಿಸಿದ್ದು, ಈ ವೇಳೆ ಅವರು ಕೆಳಗೆ ಬಿದ್ದಿದ್ದಾರೆ. ಬಳಿಕ ಟ್ರ್ಯಾಕ್ಟರ್‌ನ ಚಕ್ರ ಯಶ್ವಂತ್ ಅವರ ಮೇಲೆ ಹರಿದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಯಶ್ವಂತ್ ಅವರನ್ನು ಚಿಕಿತ್ಸೆಗಾಗಿ ಹಾಸನಕ್ಕೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂರು ವರ್ಷದ ಮಗುವಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ತಂದೆಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಯಶ್ವಂತ್ ಅವರು ತಾಯಿ, ಪತ್ನಿ ಹಾಗೂ ಮೂರು ವರ್ಷದ ಮಗನನ್ನು ಅಗಲಿದ್ದಾರೆ. ಶನಿವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular