ಶಿವಮೊಗ್ಗ : ರಸ್ತೆ ಬದಿ ಕಾರು ನಿಲ್ಲಿಸಿ ಸ್ನೇಹಿತೆಯರಿಗಾಗಿ ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಬೆದರಿಸಿ, ಕಾರಿನ ಗ್ಲಾಸ್ ಒಡೆದು ಕೊರಳಲ್ಲಿದ್ದ ಚಿನ್ನದ ಸರ ದೋಚಿಕೊಂಡು ಅಪರಿಚಿತ ವ್ಯಕ್ತಿಯೊಬ್ಬ ಪರಾರಿಯಾಗಿರುವ ಘಟನೆ ಶಿವಮೊಗ್ಗದ ಪುರದಾಳು ರಸ್ತೆಯಲ್ಲಿ ನಡೆದಿದೆ.
ಪುರದಾಳು ಡ್ಯಾಂಗೆ ತೆರಳುತ್ತಿದ್ದ ವಿದ್ಯಾರ್ಥಿನಿ, ಸ್ನೇಹಿತೆಯರಿಗಾಗಿ ರಸ್ತೆ ಬದಿ ಕಾರಿನಲ್ಲಿ ಕಾಯುತ್ತಿದ್ದರು ಎನ್ನಲಾಗಿದೆ. ಈ ವೇಳೆ ಏಕಾಏಕಿ ಬಂದ ಅಪರಿಚಿತ ವ್ಯಕ್ತಿ ಕೋಲಿನಿಂದ ಕಾರಿನ ಗ್ಲಾಸ್ ಒಡೆದು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದಾನೆ. ಬಳಿಕ ವಿದ್ಯಾರ್ಥಿನಿಯ ಕೊರಳಲ್ಲಿದ್ದ ಸುಮಾರು 15 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯಿಂದ ವಿದ್ಯಾರ್ಥಿನಿ ಆತಂಕಕ್ಕೊಳಗಾಗಿದ್ದು, ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.
ಆರೋಪಿಯ ಗುರುತು ಹಾಗೂ ಕೃತ್ಯಕ್ಕೆ ಬಳಸಿದ ವಾಹನ ಸೇರಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

