ಮೈಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿದ್ದ ವಾಹನ ಅಪಘಾತಕ್ಕೀಡಾಗಿ ಹಲವರು ಗಾಯಗೊಂಡಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಸಫಾರಿ ವೇಳೆ ಹುಲಿ ಕಾಣಿಸಿಕೊಂಡಿರುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ವಾಹನ ಸ್ಥಳಕ್ಕೆ ತೆರಳುತ್ತಿತ್ತು. ಈ ವೇಳೆ ವಾಹನದ ಗೇರ್ ಕಾರ್ಯನಿರ್ವಹಿಸದೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸಫಾರಿ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಸಫಾರಿ ವಾಹನದ ಮುಂಭಾಗ ನುಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಸುಮಾರು 25 ಪ್ರವಾಸಿಗರಲ್ಲಿ ಹೆಚ್ಚಿನವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಕೆಲವರಿಗೆ ಗಂಭೀರ ಗಾಯಗಳಾಗಿರುವ ಮಾಹಿತಿ ಲಭ್ಯವಾಗಿದೆ.
ಗಾಯಾಳುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತುರ್ತು ವಾಹನಗಳ ಮೂಲಕ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಘಟನೆಯ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

