Sunday, August 23, 2026
Homeಜಿಲ್ಲೆಸುರತ್ಕಲ್ : ಪ್ರಯಾಣಿಕರ ಸಂಕಷ್ಟಕ್ಕೆ ಮಿಡಿದ ‘ಮೀಡಿಯಾ ಮನಸುಗಳು’: ಹಳೆಯಂಗಡಿ ಬಸ್ ತಂಗುದಾಣಕ್ಕೆ ಹೊಸ ರೂಪ.

ಸುರತ್ಕಲ್ : ಪ್ರಯಾಣಿಕರ ಸಂಕಷ್ಟಕ್ಕೆ ಮಿಡಿದ ‘ಮೀಡಿಯಾ ಮನಸುಗಳು’: ಹಳೆಯಂಗಡಿ ಬಸ್ ತಂಗುದಾಣಕ್ಕೆ ಹೊಸ ರೂಪ.

ಸುರತ್ಕಲ್ : ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊಳಚೆ, ಕಸ ಹಾಗೂ ಪೊದೆಗಳಿಂದಾಗಿ ದುಸ್ಥಿತಿಗೆ ತಲುಪಿದ್ದ ಹಳೆಯಂಗಡಿಯ ಪ್ರಮುಖ ಬಸ್ ತಂಗುದಾಣಕ್ಕೆ ಇದೀಗ ‘ಮೀಡಿಯಾ ಮನಸುಗಳು’ ಸಂಘಟನೆಯ ಸದಸ್ಯರು ಕಾಯಕಲ್ಪ ನೀಡಿದ್ದಾರೆ.

ಹಳೆಯಂಗಡಿ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿರುವ ಈ ಬಸ್ ತಂಗುದಾಣ ಕಟೀಲು ಕ್ಷೇತ್ರ ಹಾಗೂ ಕಿನ್ನಿಗೋಳಿ ಭಾಗಗಳಿಗೆ ಸಂಚರಿಸುವ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ಪ್ರಮುಖ ಆಶ್ರಯವಾಗಿದೆ. ಆದರೆ ಕಳೆದ ಸುಮಾರು ಒಂದು ವರ್ಷದಿಂದ ತಂಗುದಾಣದ ಪರಿಸರದಲ್ಲಿ ಚರಂಡಿ, ಕೊಳಚೆ ಹಾಗೂ ಮಳೆನೀರು ನಿಂತು ದುರ್ವಾಸನೆ ಬೀರುತ್ತಿತ್ತು. ಪೊದೆಗಳು ಬೆಳೆದು, ಕಸದ ರಾಶಿ ಹಾಗೂ ಪ್ಲಾಸ್ಟಿಕ್ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದಿದ್ದವು.
ರಾತ್ರಿ ವೇಳೆ ಈ ಪ್ರದೇಶ ಕುಡುಕರ ಅಡ್ಡೆಯಾಗುವ ಜೊತೆಗೆ, ತಂಗುದಾಣದ ಸಮೀಪದ ಹೈಟೆನ್ಷನ್ ವಿದ್ಯುತ್ ತಂತಿಗಳಿಗೆ ಮರಗಿಡಗಳು ತಾಗಿದ್ದರಿಂದ ಮಳೆ-ಗಾಳಿ ಸಂದರ್ಭ ಅಪಾಯದ ಆತಂಕವೂ ಎದುರಾಗಿತ್ತು. ಈ ಕುರಿತು ಹಲವು ಬಾರಿ ವರದಿಗಳು ಪ್ರಕಟವಾದರೂ ಸಂಬಂಧಪಟ್ಟ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಅಧಿಕಾರಿಗಳಿಗಾಗಿ ಕಾಯದೆ ಸ್ವಚ್ಛತಾ ಕಾರ್ಯ ಸಮಸ್ಯೆಗೆ ಸ್ಪಂದಿಸಿದ ‘ಮೀಡಿಯಾ ಮನಸುಗಳು’ ಸಂಘಟನೆಯ ಸದಸ್ಯರು ಸ್ವತಃ ಸ್ಥಳಕ್ಕೆ ತೆರಳಿ ಶ್ರಮದಾನದ ಮೂಲಕ ಬಸ್ ತಂಗುದಾಣವನ್ನು ಸಂಪೂರ್ಣ ಸ್ವಚ್ಛಗೊಳಿಸಿದರು.

ಹಳೆಯ ಕಸ, ಮಣ್ಣು, ಪಾಚಿ ಹಾಗೂ ಪೊದೆಗಳನ್ನು ತೆರವುಗೊಳಿಸಿ, ತಂಗುದಾಣವನ್ನು ತೊಳೆದು ಸ್ವಚ್ಛಗೊಳಿಸಲಾಯಿತು. ಚರಂಡಿ ಹಾಗೂ ಬೋರ್ಡ್‌ಗಳನ್ನೂ ಶುಚಿಗೊಳಿಸಲಾಯಿತು. ಮೆಸ್ಕಾಂ ಸಹಕಾರದೊಂದಿಗೆ ಹೈಟೆನ್ಷನ್ ತಂತಿಗಳಿಗೆ ಅಪಾಯಕಾರಿಯಾಗಿ ತಾಗಿದ್ದ ಮರಗಿಡಗಳನ್ನೂ ತೆರವುಗೊಳಿಸಲಾಯಿತು. ಈ ಸಮಾಜಮುಖಿ ಕಾರ್ಯದಲ್ಲಿ ಶಶಿ ಬೆಳ್ಳಾಯ, ಬಾಲಕೃಷ್ಣ ಶೆಟ್ಟಿ ಸೂರಿಂಜೆ, ಶಿವು ಕುಲಾಲ್, ಸಂದೇಶ್ ಶೆಟ್ಟಿ, ಗಣೇಶ್ ಪಂಜ ಹಾಗೂ ಗಿರೀಶ್ ಮಣೇಲ್ ಸಕ್ರಿಯವಾಗಿ ಪಾಲ್ಗೊಂಡರು.

ಮೆಸ್ಕಾಂ ಪವರ್‌ಮ್ಯಾನ್ ಶ್ರೀಕಾಂತ್ ಹಾಗೂ ಪೂಜಾ ಕೇಟರರ್ಸ್ ಮಾಲಕ ಜೈಕೃಷ್ಣ ಕೋಟ್ಯಾನ್ ಸಹ ಕಾರ್ಯಕ್ಕೆ ಕೈಜೋಡಿಸಿ ಸಹಕಾರ ನೀಡಿದರು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳುಬಿದ್ದಿದ್ದ ಬಸ್ ತಂಗುದಾಣವನ್ನು ಯುವಕರ ತಂಡವೇ ಮುಂದೆ ನಿಂತು ಸ್ವಚ್ಛಗೊಳಿಸಿ ಮತ್ತೆ ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಕೇವಲ ವರದಿ ಮಾಡುವುದಷ್ಟೇ ಅಲ್ಲ, ಪರಿಹಾರದ ಭಾಗವಾಗಿಯೂ ನಿಲ್ಲಬಹುದು ಎಂಬುದನ್ನು ‘ಮೀಡಿಯಾ ಮನಸುಗಳು’ ಕಾರ್ಯ ತೋರಿಸಿಕೊಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular