ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಮಾನವೀಯತೆಯನ್ನೇ ಪ್ರಶ್ನಿಸುವಂತಹ ಘಟನೆ ನಡೆದಿದೆ. ಕುಟುಂಬದವರ ಆಸರೆ ಇಲ್ಲದೆ ಹಲವು ವರ್ಷಗಳಿಂದ ರಸ್ತೆಯಲ್ಲಿ ಅಲೆದಾಡುತ್ತಿದ್ದ ವೃದ್ಧೆ ಶೇಷಮ್ಮ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಲಾಗಿತ್ತು. ಆದರೆ ಇದೀಗ ಅನಾರೋಗ್ಯ ಹಾಗೂ ಗಲಾಟೆಯ ನೆಪದಲ್ಲಿ ವೃದ್ಧಾಶ್ರಮದ ಸಿಬ್ಬಂದಿ ಅವರನ್ನು ಬಸವನಹಳ್ಳಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೂಲತಃ ಚಿಕ್ಕಮಗಳೂರು ನಗರದ ಶಂಕರಪುರ ನಿವಾಸಿಯಾಗಿರುವ ಶೇಷಮ್ಮ ಕಳೆದ ಸುಮಾರು 10 ವರ್ಷಗಳಿಂದ ರಸ್ತೆಯಲ್ಲೇ ಅಲೆದಾಡುತ್ತಿದ್ದರು ಎನ್ನಲಾಗಿದೆ. ಕಳೆದೊಂದು ವಾರದ ಹಿಂದೆ ಪೊಲೀಸರು ಅವರನ್ನು ನಗರದ ರಾಮನಹಳ್ಳಿಯ ಶ್ರೀ ಸಾಯಿ ವೃದ್ಧಾಶ್ರಮಕ್ಕೆ ಸೇರಿಸಿದ್ದರು.
ಆದರೆ, ವೃದ್ಧಾಶ್ರಮದ ಸಿಬ್ಬಂದಿ ಶೇಷಮ್ಮ ಅವರನ್ನು ಅನಾರೋಗ್ಯ ಹಾಗೂ ಗಲಾಟೆಯ ನೆಪದಲ್ಲಿ ಪೊಲೀಸ್ ಠಾಣೆಯ ಮುಂದೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ಮಳೆಯ ನಡುವೆಯೇ ಠಾಣೆ ಮುಂಭಾಗದಲ್ಲಿ ಕುಳಿತಿದ್ದ ಶೇಷಮ್ಮ ಅವರನ್ನು ಗಮನಿಸಿದ ಪೊಲೀಸರು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಪೊಲೀಸರು ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕ್ಕಮಗಳೂರು ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ವೃದ್ಧೆಗೆ ಆಸರೆಯಾಗಬೇಕಾದ ವೃದ್ಧಾಶ್ರಮವೇ ಅವರನ್ನು ರಸ್ತೆಗೆ ಬಿಟ್ಟು ಹೋಗಿರುವ ಆರೋಪದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೃದ್ಧಾಶ್ರಮದ ಜವಾಬ್ದಾರಿ ಏನು? ಶೇಷಮ್ಮನಿಗೆ ಇನ್ನು ಮುಂದೆ ಆಸರೆಯಾಗುವವರು ಯಾರು? ಎಂಬ ಪ್ರಶ್ನೆಗಳು ಇದೀಗ ಮೂಡಿವೆ. ಇದೇ ವೇಳೆ, ಮಳೆಯ ನಡುವೆಯೂ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಗೆ ತಕ್ಷಣ ಸ್ಪಂದಿಸಿ ಆಸ್ಪತ್ರೆಗೆ ದಾಖಲಿಸಿದ ಪೊಲೀಸರ ಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

