ಶಿವಮೊಗ್ಗ: ಗುಜರಾತ್ ವಿಧಾನಸಭೆ ಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆಸುವುದಾಗಿ ಮುಖ್ಮಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹೀಗಾಗಿ ದೀಪಾವಳಿ ಬಳಿಕ ನಡೆಯಬಹುದು ಎಂದು ನಿರೀಕ್ಷಿಸಲಾಗಿದ್ದ ಸಚಿವ ಸಂಪುಟ ವಿಸ್ತರಣೆ ವಿಚಾರ ಈಗ ಮತ್ತಷ್ಟು ಮುಂದಕ್ಕೆ ಹೋಗಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಗುಜರಾತ್ ಚುನಾವಣೆ ನಂತರ ಕೇಂದ್ರ ನಾಯಕರನ್ನ ಭೇಟಿ ಮಾಡುತ್ತೇನೆ ಮತ್ತು ಮಾಹಿತಿ ನೀಡುತ್ತೇನೆ ಎಂದಷ್ಟೇ ಹೇಳಿದರು.
ಇನ್ನು ಮಂಗಳೂರು ಆಟೋರಿಕ್ಷಾ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಯುಎಪಿಎ ಕಾಯ್ದೆ ದಾಖಲಾದ ಪ್ರಕರಣಗಳನ್ನು ಎನ್ಐಎ ತನಿಖಾ ಸಂಸ್ಥೆಗಳಿಗೆ ವಹಿಸಬೇಕಾಗಿದೆ. ರಾಜ್ಯ ಪೊಲೀಸರು ಮಂಗಳೂರು ಘಟನೆ ಆರೋಪಿ 24 ಗಂಟೆಗಳಲ್ಲಿ ಭೇದಿಸಿದ್ದಾರೆ. ರಾಜ್ಯದ ಪೊಲೀಸ್ ಇಲಾಖೆ ಕ್ಷಮತೆಯಿಂದ ಕಾರ್ಯನಿರ್ವಹಿಸುತ್ತದೆ. ತನಿಖೆ ತೀವ್ರವಾಗಿ ನಡೆಯುತ್ತಿದೆ. ಸೂಕ್ತ ತನಿಖೆಗೆ ಆದೇಶ ನೀಡಿದ್ದೇನೆ ಎಂದರು.