ಮಂಗಳೂರು : ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದ ಪ್ರಯಾಣಿಕನೊಬ್ಬ ಅಪಾಯಕ್ಕೆ ಸಿಲುಕಿದ್ದು, ಕರ್ತವ್ಯದಲ್ಲಿದ್ದ ರೈಲ್ವೇ ಪಾಯಿಂಟ್ಸ್ಮನ್ ಸಮಯಪ್ರಜ್ಞೆಯಿಂದ ಆತನ ಜೀವ ಉಳಿಸಿದ ಘಟನೆ ಸುರತ್ಕಲ್ ರೈಲು ನಿಲ್ದಾಣದಲ್ಲಿ ನಡೆದಿದೆ.
ಪ್ರಯಾಣಿಕನೊಬ್ಬ ಚಲಿಸುತ್ತಿದ್ದ ರೈಲಿಗೆ ಹತ್ತಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿ ಪ್ಲಾಟ್ಫಾರ್ಮ್ ಕಡೆಗೆ ಬೀಳುವ ಅಪಾಯದಲ್ಲಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಪಾಯಿಂಟ್ಸ್ಮನ್ ಸಂದೀಪ್ ನಾಯ್ಕ್ ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ.
ರೈಲು ಕೋಚ್ ಮತ್ತು ಪ್ಲಾಟ್ಫಾರ್ಮ್ ನಡುವಿನ ಅಪಾಯಕಾರಿ ಅಂತರಕ್ಕೆ ಪ್ರಯಾಣಿಕ ಸಿಲುಕುವ ಸಾಧ್ಯತೆ ಇದ್ದ ಸಂದರ್ಭದಲ್ಲಿ, ಸಂದೀಪ್ ನಾಯ್ಕ್ ಸಮಯಪ್ರಜ್ಞೆಯಿಂದ ಪ್ರಯಾಣಿಕನನ್ನು ರಕ್ಷಿಸಿದ್ದಾರೆ.
ಸಿಬ್ಬಂದಿಯ ಸಮಯೋಚಿತ ಕ್ರಮದಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ. ಸಂದೀಪ್ ನಾಯ್ಕ್ ಅವರ ಕರ್ತವ್ಯನಿಷ್ಠೆ ಹಾಗೂ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಚಲಿಸುತ್ತಿರುವ ರೈಲಿಗೆ ಹತ್ತಲು ಅಥವಾ ಇಳಿಯಲು ಪ್ರಯತ್ನಿಸದಂತೆ ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.

