ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ, ಆಶ್ಲೇಷ ಬಲಿ ಸೇರಿದಂತೆ ಪ್ರಮುಖ ಸೇವೆಗಳನ್ನು ದೇವಳದಲ್ಲೇ ನೆರವೇರಿಸಿದರೆ ಮಾತ್ರ ಪೂರ್ಣ ಫಲ ದೊರೆಯುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.
ಆಡಳಿತದ ಪ್ರಕಾರ, ಮಧ್ಯವರ್ತಿಗಳ ಮೂಲಕ ಖಾಸಗಿ ವಸತಿ ಗೃಹಗಳು, ಮಠ-ಮಂದಿರಗಳು, ಪುರೋಹಿತರ ಮನೆಗಳು ಅಥವಾ ಇತರ ಖಾಸಗಿ ಸ್ಥಳಗಳಲ್ಲಿ ಈ ಸೇವೆಗಳನ್ನು ನಡೆಸಿದರೆ ನಾಗದೋಷ ಪರಿಹಾರವಾಗುವುದಿಲ್ಲ ಹಾಗೂ ಯಾವುದೇ ಧಾರ್ಮಿಕ ಪ್ರತಿಫಲವೂ ದೊರೆಯುವುದಿಲ್ಲ ಎಂದು ತಿಳಿಸಲಾಗಿದೆ.
ಸರ್ಪ ಸಂಸ್ಕಾರ ಸೇರಿದಂತೆ ನಾಗದೋಷ ನಿವಾರಣೆಗೆ ಸಂಬಂಧಿಸಿದ ಸೇವೆಗಳ ಕುರಿತು ಭಕ್ತರಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವ ಉದ್ದೇಶದಿಂದ ಈ ಸ್ಪಷ್ಟನೆ ನೀಡಲಾಗಿದೆ. ದೇವಸ್ಥಾನದ ವತಿಯಿಂದ ಯಾವುದೇ ಮಧ್ಯವರ್ತಿಗಳನ್ನು ನೇಮಕ ಮಾಡಿಲ್ಲ ಎಂದು ಆಡಳಿತ ಸ್ಪಷ್ಟಪಡಿಸಿದೆ.
ಸೇವೆಗಳನ್ನು ಪಡೆಯಲು ಭಕ್ತರಿಗೆ ಅಧಿಕೃತ ಆನ್ಲೈನ್ ಮುಂಗಡ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಅದನ್ನೇ ಬಳಸುವಂತೆ ಮನವಿ ಮಾಡಲಾಗಿದೆ. ಮಧ್ಯವರ್ತಿಗಳ ಮಾತು ನಂಬಿ ಖಾಸಗಿ ಸ್ಥಳಗಳಲ್ಲಿ ಸೇವೆ ಮಾಡಿಸಿ ದುಪ್ಪಟ್ಟು ಹಣ ಕಳೆದುಕೊಂಡು ಮೋಸ ಹೋಗದಂತೆ ಎಚ್ಚರಿಕೆ ನೀಡಿರುವ ಆಡಳಿತ, ಭಕ್ತರು ದೇವಸ್ಥಾನದ ಅಧಿಕೃತ ವ್ಯವಸ್ಥೆಯ ಮೂಲಕವೇ ಸೇವೆಗಳನ್ನು ಬುಕ್ ಮಾಡಬೇಕೆಂದು ವಿನಂತಿಸಿದೆ.

