ಪುತ್ತೂರು : ಕರಾವಳಿಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ.


ಭಾರೀ ಮಳೆಯಿಂದ ನೇತ್ರಾವತಿ ಮತ್ತು ಕುಮಾರಧಾರ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ನದಿ ತೀರದ ತೋಟಗಳಿಗೆ ನೀರು ನುಗ್ಗಿದೆ. ಉಜಿರೆ, ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಭಾಗಗಳ ಕೆಲ ರಸ್ತೆಗಳು ಜಲಾವೃತಗೊಂಡಿದ್ದು, ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಕೆಲವು ರಸ್ತೆಗಳಲ್ಲಿ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರಕ್ಕೂ ತೊಂದರೆ ಉಂಟಾಗಿದೆ.
ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ಎನ್‌ಡಿಆರ್‌ಎಫ್ ಇನ್ಸ್‌ಪೆಕ್ಟರ್ ಶಾಂತಿಲಾಲ್ ಜಟಿ ನೇತೃತ್ವದ ತಂಡ ಬೆಳ್ತಂಗಡಿ ಮತ್ತು ಉಜಿರೆ ಭಾಗದ ಅಪಾಯದ ಪ್ರದೇಶಗಳಿಗೆ ಆಗಮಿಸಿದೆ. ತಗ್ಗು ಪ್ರದೇಶಗಳಿಗೆ ಭೇಟಿ ನೀಡಿರುವ ತಂಡ, ಮನೆಗಳಿಗೆ ನೀರು ನುಗ್ಗಿರುವ ಸ್ಥಳಗಳನ್ನು ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಪಡೆದು ಅಗತ್ಯ ರಕ್ಷಣಾ ಕಾರ್ಯ ಕೈಗೊಂಡಿದೆ.vಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ ನದಿ ತೀರ ಹಾಗೂ ತಗ್ಗು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚಿಸಿದೆ.


