ಮಂಗಳೂರು : ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕುರಿತು ನೀಡಿರುವ ಹೇಳಿಕೆಗಳನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ತಕ್ಷಣವೇ ಹೇಳಿಕೆಯನ್ನು ಹಿಂತೆಗೆದುಕೊಂಡು ದೇಶದ ಜನರ ಕ್ಷಮೆ ಕೇಳುವಂತೆ ಆಗ್ರಹಿಸಿದೆ.
ಗೇರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ಸಾಕ್ಷ್ಯಾಧಾರವಿಲ್ಲದೆ ವ್ಯಕ್ತಿಯ ಘನತೆಗೆ ಧಕ್ಕೆ ತರುವ ಆರೋಪಗಳನ್ನು ಮಾಡುವುದು ರಾಜಕೀಯ ಸಂಸ್ಕೃತಿಗೆ ವಿರುದ್ಧವಾಗಿದೆ. ಜನಪ್ರತಿನಿಧಿಗಳು ವೈಯಕ್ತಿಕ ನಿಂದನೆಗಳಲ್ಲಿ ತೊಡಗದೆ ಜನರ ಸಮಸ್ಯೆಗಳ ಕುರಿತು ಚರ್ಚಿಸಬೇಕು ಎಂದು ಹೇಳಿದರು.
ರಾಹುಲ್ ಗಾಂಧಿ ಅವರ ಕುಟುಂಬದ ಬಗ್ಗೆ ಬೆದರಿಕೆ ಹಾಗೂ ಹಿಂಸೆಯನ್ನು ಸೂಚಿಸುವ ರೀತಿಯ ಹೇಳಿಕೆ ನೀಡಿರುವುದಾಗಿ ವರದಿಯಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇಂತಹ ಹೇಳಿಕೆಗಳು ರಾಜಕೀಯ ಭಿನ್ನಾಭಿಪ್ರಾಯದ ಮಿತಿಯನ್ನು ಮೀರಿ ದ್ವೇಷ ಮತ್ತು ಪ್ರಚೋದನೆಗೆ ಉತ್ತೇಜನ ನೀಡುವಂತಿವೆ ಎಂದು ತಿಳಿಸಿದೆ.
ಯಶ್‌ಪಾಲ್ ಸುವರ್ಣ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂತೆಗೆದುಕೊಂಡು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳು ಈ ಹೇಳಿಕೆಗಳ ಕುರಿತು ಕಾನೂನುಬದ್ಧ ಪರಿಶೀಲನೆ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಸತ್ಯ, ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಸೌಹಾರ್ದತೆಯ ಪರವಾಗಿ ಕಾಂಗ್ರೆಸ್ ತನ್ನ ಹೋರಾಟ ಮುಂದುವರಿಸಲಿದೆ. ವೈಯಕ್ತಿಕ ನಿಂದನೆ, ಬೆದರಿಕೆ ಮತ್ತು ದ್ವೇಷದ ರಾಜಕಾರಣವನ್ನು ಪಕ್ಷ ಎಂದಿಗೂ ಒಪ್ಪುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ವೀಣಾ, ಮಾಜಿ ಕಾರ್ಪೊರೇಟರ್ ಅಪ್ಪಿ, ಶಶಿಕಲಾ ಹಾಗೂ ವೃಂದಾ ಪೂಜಾರಿ ಉಪಸ್ಥಿತರಿದ್ದರು.


