ಮಂಗಳೂರು : ನಗರದ ಪ್ರತಿಷ್ಠಿತ ಸಂಸ್ಥೆಯಾದ ರೋಹನ್ ಕಾರ್ಪೊರೇಷನ್ ವತಿಯಿಂದ ‘ದಿ ಗ್ರಾಟಿಟ್ಯೂಡ್ ಗ್ಯಾದರಿಂಗ್’ (The Gratitude Gathering) ಹೆಸರಿನ ವಿಶೇಷ ಕೃತಜ್ಞತಾ ಸಮಾರಂಭವು ನಗರದ ಬಿಜೈನಲ್ಲಿರುವ ರೋಹನ್ ಸಿಟಿಯಲ್ಲಿ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ರೂಪಶ್ರೀ ವರ್ಕಾಡಿ, ನಿರ್ದೇಶಕ ಶಿವಧ್ವಜ್ ಶೆಟ್ಟಿ, ನಿರ್ಮಾಪಕ ಪ್ರಶಾಂತ್ ರೈ, ಡಾ. ಪ್ರದೀಪ್ ಕೆಂಚನೂರು ಹಾಗೂ ಬಾಲನಟ ಆತೀಶ್ ಎಸ್. ಶೆಟ್ಟಿ ಅವರನ್ನು ರೋಹನ್ ಕಾರ್ಪೊರೇಷನ್ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ದೇಶಕ ಶಿವಧ್ವಜ್ ಶೆಟ್ಟಿ, ರೋಹನ್ ಕಾರ್ಪೊರೇಷನ್ ಸಿನಿಮಾ ಕ್ಷೇತ್ರಕ್ಕೆ ನಿರಂತರವಾಗಿ ನೀಡುತ್ತಿರುವ ಪ್ರೋತ್ಸಾಹವನ್ನು ಶ್ಲಾಘಿಸಿದರು. ಇಂತಹ ಗೌರವಗಳು ಕಲಾವಿದರಿಗೆ ಹೊಸ ಪ್ರೇರಣೆ ನೀಡುತ್ತವೆ. ಕರ್ನಾಟಕ ಹಾಗೂ ಕರಾವಳಿಯಲ್ಲಿ ಉತ್ತಮ ಕಥಾವಸ್ತುಗಳಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅವಕಾಶಗಳು ಸಾಕಷ್ಟಿವೆ ಎಂದು ಅಭಿಪ್ರಾಯಪಟ್ಟರು. ತಮ್ಮ ನಿರ್ದೇಶನದ ‘ಇಂಬು’ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.
ರೂಪಶ್ರೀ ವರ್ಕಾಡಿ ಮಾತನಾಡಿ, ಕಲೆ ಮತ್ತು ಕಲಾವಿದರನ್ನು ಸದಾ ಬೆಂಬಲಿಸುತ್ತಿರುವ ರೋಹನ್ ಕಾರ್ಪೊರೇಷನ್‌ಗೆ ಅಭಿನಂದನೆ ಸಲ್ಲಿಸಿದರು. ರಾಷ್ಟ್ರೀಯ ಪ್ರಶಸ್ತಿ ವಿಜೇತರನ್ನು ಗೌರವಿಸಿರುವುದು ಸಂತಸದ ವಿಷಯವಾಗಿದ್ದು, ಈ ಗೌರವವನ್ನು ನಾಡಿನ ಜನತೆಗೆ ಅರ್ಪಿಸುವುದಾಗಿ ಹೇಳಿದರು. ರೋಹನ್ ಕಾರ್ಪೊರೇಷನ್‌ನ ಡಿಯೋನ್ ಮೊಂತೆರೋ ಮಾತನಾಡಿ, ರಾಷ್ಟ್ರೀಯ ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಮಂಗಳೂರು ಹಾಗೂ ಕರಾವಳಿಯ ಸಿನಿಮಾ ರಂಗ ಇನ್ನಷ್ಟು ಬೆಳೆಯಬೇಕಿದ್ದು, ಸ್ಥಳೀಯ ಕಲಾವಿದರ ಪ್ರತಿಭೆ ಮತ್ತು ಪರಿಶ್ರಮವೇ ಅವರನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದಿದೆ ಎಂದು ಹೇಳಿದರು.
ಇತ್ತೀಚೆಗೆ ನಗರದಲ್ಲಿ ವಿಜೃಂಭಣೆಯಿಂದ ನಡೆದ ‘ಆನ್ ಈವ್ನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಅಭಿಮಾನಿಗಳು, ಬೆಂಬಲಿಗರು, ಸಹಯೋಗಿಗಳು ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಎಂ. ಡಿ ಸುಮನಾ ಇದ್ದರು ತುಷಾನ್ ಸ್ವಾಗತಿಸಿದರು. ಸಾಲೆಟ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


