Saturday, July 11, 2026
Homeರಾಜಕೀಯಚಿಕ್ಕಮಗಳೂರು : ಮೂಡಿಗೆರೆ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ತಾರಕಕ್ಕೆ ; ಹಿರಿಯರ 16 ಅಂಶಗಳ ದೂರಿಗೆ...

ಚಿಕ್ಕಮಗಳೂರು : ಮೂಡಿಗೆರೆ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ತಾರಕಕ್ಕೆ ; ಹಿರಿಯರ 16 ಅಂಶಗಳ ದೂರಿಗೆ ಕಿರಿಯರ 13 ಅಂಶಗಳ ಪ್ರತಿಕ್ರಿಯೆ.

ಚಿಕ್ಕಮಗಳೂರು : ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಘಟಕದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮತ್ತಷ್ಟು ತೀವ್ರಗೊಂಡಿದೆ. ಶಾಸಕಿ ನಯನಾ ಮೋಟಮ್ಮ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ 16 ಅಂಶಗಳ ದೂರು ಸಲ್ಲಿಸಿದ ಬೆನ್ನಲ್ಲೇ, ಇದೀಗ ಕಿರಿಯ ಮುಖಂಡರು ಶಾಸಕಿಯ ಪರವಾಗಿ 13 ಅಂಶಗಳ ಮನವಿ ಸಲ್ಲಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹಿರಿಯ ಮುಖಂಡರು ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಶಾಸಕಿ ನಯನಾ ಮೋಟಮ್ಮ ವಿರುದ್ಧ ದೂರು ದಾಖಲಿಸಿದ್ದರು. ಈ ಬೆಳವಣಿಗೆಯ ನಂತರ ಯುವ ಹಾಗೂ ಕಿರಿಯ ಕಾಂಗ್ರೆಸ್ ಮುಖಂಡರು ಶಾಸಕಿಯ ಪರವಾಗಿ ಒಗ್ಗೂಡಿ ಕೆಪಿಸಿಸಿ ಅಧ್ಯಕ್ಷರಿಗೆ ಪ್ರತ್ಯೇಕ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ ಶಾಸಕಿ ನಯನಾ ಮೋಟಮ್ಮ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಲಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಅವರ ನಾಯಕತ್ವ ಅಗತ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಮೊದಲ ಬಾರಿಗೆ ಸುಮಾರು 700 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ನಯನಾ ಮೋಟಮ್ಮ ಅವರ ಪರವಾಗಿ ಯುವ ಮುಖಂಡರು ಬಹಿರಂಗವಾಗಿ ನಿಂತಿರುವುದು ಮೂಡಿಗೆರೆ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಒಂದೆಡೆ ಹಿರಿಯರ 16 ಅಂಶಗಳ ದೂರು, ಮತ್ತೊಂದೆಡೆ ಕಿರಿಯರ 13 ಅಂಶಗಳ ಬೆಂಬಲದ ಮನವಿ ಸಲ್ಲಿಕೆಯಿಂದ ಮೂಡಿಗೆರೆ ಕಾಂಗ್ರೆಸ್‌ನಲ್ಲಿ “ಮನೆಯೊಂದು ಮೂರು ಬಾಗಿಲು” ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಆಂತರಿಕ ಕಗ್ಗಂಟು ದಿನದಿಂದ ದಿನಕ್ಕೆ ಮತ್ತಷ್ಟು ಜಟಿಲವಾಗುತ್ತಿದೆ.

ಈ ಬೆಳವಣಿಗೆಗೆ ಕೆಪಿಸಿಸಿ ನಾಯಕತ್ವ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದರತ್ತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಾಜಕೀಯ ವಲಯದ ಗಮನ ನೆಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular