ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ಹೊಲದಲ್ಲಿ ಸಿಕ್ಕ ಅಣಬೆ (ಮಶರೂಮ್) ಸೇವಿಸಿದ ಪರಿಣಾಮ ಒಂದೇ ಕುಟುಂಬದ 9 ಮಂದಿ ಅಸ್ವಸ್ಥಗೊಂಡ ಘಟನೆ ನಡೆದಿದೆ.
ಜಿದ್ದಿಮನಿ ಹಾಗೂ ಕೋಳಿ ಕುಟುಂಬದ ಸದಸ್ಯರು ಕೆಲಸ ಮುಗಿಸಿಕೊಂಡು ಮನೆಗೆ ವಾಪಸಾಗುವ ವೇಳೆ ಹೊಲದಲ್ಲಿ ಕಂಡ ಅಣಬೆಯನ್ನು ಕಿತ್ತು ತಂದು ಮನೆಯಲ್ಲಿ ಅಡುಗೆ ಮಾಡಿಕೊಂಡು ಸೇವಿಸಿದ್ದರು. ಅಣಬೆ ತಂದಿರುವುದನ್ನು ಕಂಡ ಮತ್ತೊಂದು ಕುಟುಂಬವೂ ಅದನ್ನೇ ಬಳಸಿಕೊಂಡು ಅಡುಗೆ ಮಾಡಿತ್ತು.
ಆದರೆ, ಅಣಬೆ ಬೆಳೆದಿದ್ದ ಹೊಲಕ್ಕೆ ಮಾಲೀಕರು ಈ ಹಿಂದೆ ಕೀಟನಾಶಕ ಔಷಧಿ ಸಿಂಪಡಿಸಿದ್ದು, ಈ ವಿಷಯ ತಿಳಿಯದೇ ಕುಟುಂಬದವರು ಅಣಬೆ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ.
ಊಟ ಮಾಡಿದ ಕೆಲವೇ ಸಮಯದಲ್ಲಿ ಎಲ್ಲರಿಗೂ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರಲ್ಲಿ ಓರ್ವ ಗರ್ಭಿಣಿ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ 9 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ವೈದ್ಯರ ನಿಗಾದಲ್ಲಿ ಚಿಕಿತ್ಸೆ ಮುಂದುವರಿದಿದೆ.


