Wednesday, July 1, 2026
Homeರಾಜಕೀಯಬೆಂಗಳೂರು : 20 ಸಚಿವ ಸ್ಥಾನಗಳಿಗೆ 80ಕ್ಕೂ ಹೆಚ್ಚು ಆಕಾಂಕ್ಷಿಗಳು ; ಕಾಂಗ್ರೆಸ್‌ನಲ್ಲಿ ಮಂತ್ರಿಗಿರಿಯ ಮಹಾ...

ಬೆಂಗಳೂರು : 20 ಸಚಿವ ಸ್ಥಾನಗಳಿಗೆ 80ಕ್ಕೂ ಹೆಚ್ಚು ಆಕಾಂಕ್ಷಿಗಳು ; ಕಾಂಗ್ರೆಸ್‌ನಲ್ಲಿ ಮಂತ್ರಿಗಿರಿಯ ಮಹಾ ಕದನ,ಡಿಕೆಶಿ ಮುಂದಿದೆ ಕಠಿಣ ಸವಾಲು.

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಕಸರತ್ತು ತೀವ್ರಗೊಂಡಿದ್ದು, ಖಾಲಿ ಇರುವ 20 ಸಚಿವ ಸ್ಥಾನಗಳಿಗೆ 80ಕ್ಕೂ ಹೆಚ್ಚು ಶಾಸಕರು ತೀವ್ರ ಲಾಬಿ ನಡೆಸುತ್ತಿದ್ದಾರೆ. ಜುಲೈನಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಗಳ ನಡುವೆ ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಹಲವು ನಾಯಕರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿರುವುದು ರಾಜಕೀಯ ಚಟುವಟಿಕೆಗೆ ವೇಗ ನೀಡಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಮೊದಲ ಹಂತದ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ ಒಟ್ಟು 13 ಸಚಿವರನ್ನು ಮಾತ್ರ ಸೇರಿಸಲಾಗಿತ್ತು. ನಿಯಮಾನುಸಾರ ಇನ್ನೂ 20 ಸಚಿವ ಸ್ಥಾನಗಳು ಖಾಲಿ ಉಳಿದಿವೆ. ಈ ಸ್ಥಾನಗಳಿಗಾಗಿ ಹಿರಿಯರು, ಯುವ ಶಾಸಕರು ಹಾಗೂ ವಿವಿಧ ಸಮುದಾಯಗಳ ಪ್ರತಿನಿಧಿಗಳು ಭಾರೀ ಪೈಪೋಟಿ ನಡೆಸುತ್ತಿದ್ದಾರೆ.

ಕಳೆದ ಮೂರು-ನಾಲ್ಕು ದಿನಗಳಿಂದ ದೆಹಲಿಯಲ್ಲಿ ಮೊಕ್ಕಾಂ ಹೂಡಿರುವ ಹಲವು ಶಾಸಕರು ಹಾಗೂ ನಾಯಕರು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಹಿರಿಯ ನಾಯಕರು ಸೇರಿದಂತೆ ದಿನೇಶ್ ಗುಂಡೂರಾವ್, ಎನ್.ಎ. ಹ್ಯಾರಿಸ್, ಉಮಾಶ್ರೀ, ಪುಟ್ಟಣ್ಣ ಹಾಗೂ ಆರತಿ ಕೃಷ್ಣ ಅವರು ಹೈಕಮಾಂಡ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರು ತಾವು ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಮುದಾಯಗಳ ಒತ್ತಡ ಹೆಚ್ಚಳ : ಸಚಿವ ಸ್ಥಾನ ಹಂಚಿಕೆಯಲ್ಲಿ ವಿವಿಧ ಸಮುದಾಯಗಳು ತಮ್ಮ ಪಾಲು ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿವೆ.

ಮುಸ್ಲಿಂ ಸಮುದಾಯ: 3–4 ಸಚಿವ ಸ್ಥಾನಗಳ ಬೇಡಿಕೆ
ಒಕ್ಕಲಿಗ ಸಮುದಾಯ: ಹೆಚ್ಚುವರಿ 5 ಸ್ಥಾನಗಳ ಬೇಡಿಕೆ
ಎಸ್‌ಸಿ/ಎಸ್‌ಟಿ ಸಮುದಾಯ: 6 ಸ್ಥಾನಗಳ ನಿರೀಕ್ಷೆ
ಲಿಂಗಾಯತ ಸಮುದಾಯ: 6–7 ಸ್ಥಾನಗಳ ಬೇಡಿಕೆ

ಜಿಲ್ಲಾವಾರು ಪ್ರಾತಿನಿಧ್ಯ ನೀಡಬೇಕೆಂಬ ಒತ್ತಾಯವೂ ಹೆಚ್ಚಾಗಿದ್ದು, ಎಲ್ಲ ಬೇಡಿಕೆಗಳನ್ನು ಸಮತೋಲನಗೊಳಿಸುವುದು ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ಸವಾಲಾಗಿದೆ.

ಯುವ ಶಾಸಕರಿಗೆ ಆದ್ಯತೆ ಸಾಧ್ಯತೆ

ಈ ಬಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಸಚಿವ ಸ್ಥಾನ ಸಿಗದವರಿಗೆ ಹಾಗೂ ಯುವ ಶಾಸಕರಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದರಿಂದ ಹಿರಿಯ ನಾಯಕರಲ್ಲೂ ಸಚಿವ ಸ್ಥಾನ ಉಳಿಸಿಕೊಳ್ಳುವ ಕಸರತ್ತು ಜೋರಾಗಿದೆ. ಈ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟ ವಿಸ್ತರಣೆ ಕುರಿತು ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲಿದ್ದು, ತಾವು ಮಧ್ಯಪ್ರವೇಶಿಸುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಜುಲೈನಲ್ಲಿ ನಡೆಯುವ ಸಾಧ್ಯತೆಯಿರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular