ಮಂಗಳೂರು : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಯುಜಿಸಿ ಶ್ರೇಣೀಕೃತ ಸ್ವಾಯತ್ತತೆ ನಿಯಮಗಳ ಅಡಿಯಲ್ಲಿ ಪ್ರತಿಷ್ಠಿತ ಕೆಟಗರಿ-1 ಸ್ಥಾನಮಾನ ಪಡೆದು ಮಹತ್ವದ ಮೈಲಿಗಲ್ಲು ಸಾಧಿಸಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ರೆ.ಡಾ. ಪ್ರವೀಣ್ ಮಾರ್ಟೀಸ್ ಎಸ್. ಜೆ ರವರು ತಿಳಿಸಿದ್ದಾರೆ.
146 ವರ್ಷಗಳ ಶೈಕ್ಷಣಿಕ ಪರಂಪರೆ ಹೊಂದಿರುವ ವಿಶ್ವವಿದ್ಯಾಲಯವು ಶಿಕ್ಷಣ, ಸಂಶೋಧನೆ, ನಾವೀನ್ಯತೆ, ಆಡಳಿತ ಹಾಗೂ ರಾಷ್ಟ್ರ ನಿರ್ಮಾಣ ಕ್ಷೇತ್ರಗಳಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಈ ಮಾನ್ಯತೆ ಪಡೆದಿದೆ ಎಂದರು.
ಪ್ರಸ್ತುತ ದೇಶದ 1,292 ವಿಶ್ವವಿದ್ಯಾಲಯಗಳ ಪೈಕಿ ಕೇವಲ 26 ಸಂಸ್ಥೆಗಳು ಮಾತ್ರ ಕೆಟಗರಿ-1 ಸ್ಥಾನಮಾನ ಪಡೆದಿದ್ದು, ಸಂತ ಅಲೋಶಿಯಸ್ ವಿಶ್ವವಿದ್ಯಾಲಯವು ಈ ಗೌರವ ಪಡೆದ ಪ್ರಮುಖ ಖಾಸಗಿ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸ್ಥಾನಮಾನದಿಂದ ವಿಶ್ವವಿದ್ಯಾಲಯಕ್ಕೆ ಹೊಸ ಶೈಕ್ಷಣಿಕ ಕಾರ್ಯಕ್ರಮಗಳು, ವಿಭಾಗಗಳು, ಸಂಶೋಧನಾ ಕೇಂದ್ರಗಳು, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಯುಜಿಸಿಯ ಪೂರ್ವಾನುಮತಿ ಇಲ್ಲದೆ ಆರಂಭಿಸುವ ಸ್ವಾಯತ್ತತೆ ದೊರೆಯಲಿದೆ. ಜೊತೆಗೆ ಅಂತರರಾಷ್ಟ್ರೀಯ ಸಹಯೋಗ, ಜಂಟಿ ಸಂಶೋಧನಾ ಯೋಜನೆಗಳು, ಅಧ್ಯಾಪಕ ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು ಹಾಗೂ ದ್ವಿಪದವಿ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಡಾ. ರೊನಾಲ್ಡ್ ನಜರೆತ್, ಚಂದ್ರಕಲಾ,ದಿನೇಶ್ ನಾಯಕ್ ರವರು ಉಪಸ್ಥಿತರಿದ್ದರು.


