ಮಂಗಳೂರು : ಡೀಸೆಲ್ ಬೆಲೆಯಲ್ಲಿ ಕಳೆದ ಕೆಲವು ತಿಂಗಳಲ್ಲಿ ಸುಮಾರು ₹9 ರಷ್ಟು ಏರಿಕೆಯಾಗಿರುವ ಪರಿಣಾಮ ಖಾಸಗಿ ಬಸ್ ಉದ್ಯಮ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ ಎಂದು ರಾಣಿ ಅಬ್ಬಕ್ಕ ಖಾಸಗಿ ಬಸ್ ನೌಕರರ ಸಂಘದ ಅಧ್ಯಕ್ಷ ಉಸ್ಮಾನ್ ಅಲ್ತಾಫ್ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಮೇಲೆ ಹೆಚ್ಚಿನ ಹೊರೆ ಬೀಳದ ರೀತಿಯಲ್ಲಿ ಕೇವಲ ₹1 ರಿಂದ ₹3 ರವರೆಗೆ ಮಾತ್ರ ಟಿಕೆಟ್ ದರ ಹೆಚ್ಚಳ ಮಾಡಲು ಬಸ್ ಮಾಲಕರು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಜಾರಿಯಲ್ಲಿರುವುದರಿಂದ ಖಾಸಗಿ ಬಸ್ ಸೇವೆಗಳ ಆದಾಯದ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಇದರ ಜೊತೆಗೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ದರ ಪರಿಷ್ಕರಣೆ ನಡೆದಿರುವುದನ್ನು ಉಲ್ಲೇಖಿಸಿರುವ ಅವರು, ಖಾಸಗಿ ಬಸ್ ಕ್ಷೇತ್ರಕ್ಕೂ ಅಗತ್ಯ ಬೆಂಬಲ ದೊರೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕೆಲವೆಡೆ ರಿಕ್ಷಾಗಳು ನಿಗದಿತ ಪಾರ್ಕಿಂಗ್ ಸ್ಥಳಗಳನ್ನು ಬಿಟ್ಟು ಬಸ್ ನಿಲ್ದಾಣಗಳ ಎದುರಲ್ಲೇ ಕಡಿಮೆ ದರದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿರುವುದು ನಿಯಮಬದ್ಧವಾಗಿ ಕಾರ್ಯನಿರ್ವಹಿಸುವ ರಿಕ್ಷಾ ಚಾಲಕರು ಹಾಗೂ ಖಾಸಗಿ ಬಸ್ ಸಿಬ್ಬಂದಿಗೆ ಸಮಸ್ಯೆ ಉಂಟುಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಎಲ್ಲ ವಿಚಾರಗಳನ್ನು ರಿಕ್ಷಾ ಯೂನಿಯನ್, ಖಾಸಗಿ ಬಸ್ ನೌಕರರ ಸಂಘ, ಬಸ್ ಮಾಲಕರ ಸಂಘ ಹಾಗೂ ಸಂಬಂಧಿತ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುಗಮವಾಗಿ ಸಾಗುವಂತೆ ಹಾಗೂ ಎಲ್ಲರಿಗೂ ನ್ಯಾಯ ಸಿಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಉಸ್ಮಾನ್ ಅಲ್ತಾಫ್ ಮನವಿ ಮಾಡಿದ್ದಾರೆ.

