ಮಂಗಳೂರು : ಅರಬ್ಬಿ ಸಮುದ್ರ ಹಾಗೂ ಬಂಗಾಳ ಕೊಲ್ಲಿ ಭಾಗಗಳಲ್ಲಿ ಮುಂದಿನ ಐದು ದಿನಗಳ ಕಾಲ ಬಿರುಗಾಳಿ ಸಹಿತ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮೇ 20ರಿಂದ 25ರವರೆಗೆ ಕೇರಳ, ಕರ್ನಾಟಕ ಕರಾವಳಿ, ಲಕ್ಷದ್ವೀಪ, ಮಾಲ್ಡೀವ್ಸ್ ಸಮೀಪದ ಸಮುದ್ರ ಪ್ರದೇಶಗಳು ಹಾಗೂ ಕೊಮೊರಿನ್ ಪ್ರದೇಶಗಳಲ್ಲಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದ್ದು, ಕೆಲವೆಡೆ ಇದು 60 ಕಿಲೋಮೀಟರ್ ವೇಗ ತಲುಪುವ ಸಾಧ್ಯತೆ ಇದೆ.
ಇದೇ ವೇಳೆ ಸೋಮಾಲಿಯಾ ಕರಾವಳಿ ಹಾಗೂ ನೈಋತ್ಯ ಅರಬ್ಬಿ ಸಮುದ್ರದ ಹಲವು ಭಾಗಗಳಲ್ಲಿ ಗಂಟೆಗೆ 45ರಿಂದ 55 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಗಾಳಿಯ ವೇಗ 65 ಕಿಲೋಮೀಟರ್ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಬಂಗಾಳ ಕೊಲ್ಲಿಯ ನೈಋತ್ಯ ಮತ್ತು ಆಗ್ನೇಯ ಭಾಗಗಳು, ಅಂಡಮಾನ್ ಸಮುದ್ರ, ಗಲ್ಫ್ ಆಫ್ ಮನ್ನಾರ್ ಹಾಗೂ ಶ್ರೀಲಂಕಾ ಕರಾವಳಿ ಸಮೀಪದಲ್ಲೂ ಬಿರುಗಾಳಿ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಕೆಲವು ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 65 ಕಿಲೋಮೀಟರ್ವರೆಗೆ ತಲುಪುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ. ಕರ್ನಾಟಕ ಹಾಗೂ ಕೇರಳ ಕರಾವಳಿಯ ಮೀನುಗಾರರು ವಿಶೇಷ ಎಚ್ಚರಿಕೆ ವಹಿಸುವಂತೆ ಹಾಗೂ ಸಮುದ್ರ ಪ್ರದೇಶದಲ್ಲಿ ಸಂಚರಿಸುವ ಹಡಗುಗಳು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಇಲಾಖೆ ಸೂಚಿಸಿದೆ.


