Friday, March 27, 2026
Flats for sale
Homeಜಿಲ್ಲೆಮಂಗಳೂರು : ಏ. 4 ರಂದು ಇನಾಯತ್ ಅಲಿ ನೇತ್ರತ್ವದ 3ನೇ ವರ್ಷದ 'ಮೂಳೂರು-ಅಡ್ಡೂರು' ಜೋಡುಕರೆ...

ಮಂಗಳೂರು : ಏ. 4 ರಂದು ಇನಾಯತ್ ಅಲಿ ನೇತ್ರತ್ವದ 3ನೇ ವರ್ಷದ ‘ಮೂಳೂರು-ಅಡ್ಡೂರು’ ಜೋಡುಕರೆ ಕಂಬಳ.

ಮಂಗಳೂರು : ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿರುವ ಕಂಬಳ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ಗುರುಪುರದ ಮಾಣಿಬೆಟ್ಟುವಿನಲ್ಲಿ ಇದೇ ಬರುವ ಏಪ್ರಿಲ್ 4ರ ಶನಿವಾರದಂದು 3ನೇ ವರ್ಷದ ಹೊನಲು ಬೆಳಕಿನ “ಮೂಳೂರು-ಅಡ್ಡೂರು” ಜೋಡುಕರೆ ಕಂಬಳವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದೆ, ಅಲ್ಲದೆ ಮುಂದಿನ ಬಾರಿ ದಸರಾದಲ್ಲಿಯೂ ಕಂಬಳ ನಡೆಸುವ ಭರವಸೆ ಡಿಸಿಎಂ ಡಿಕೆಶಿ ಅವರಿಂದ ಸಿಕ್ಕಿದೆ ಎಎಂದು ಕಂಬಳ ಸಮಿತಿ ಅಧ್ಯಕ್ಷ ಇನಾಯತ್ ಅಲಿ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಂಬಳ ಎಂಬುದು ಕೇವಲ ಒಂದು ಕ್ರೀಡೆಯಲ್ಲ, ಇದು ನಮ್ಮ ಮಣ್ಣಿನ ಸಂಸ್ಕೃತಿ. ಜಾತಿ, ಮತ, ಪಕ್ಷ ಭೇದ ಮರೆತು ಎಲ್ಲರೂ ಒಂದಾಗಿ ಆಚರಿಸುವ ಈ ಲೋಕೋತ್ಸವದ ಮೂಲಕ ನಮ್ಮ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ,” ಎಂದರು.

ಕಳೆದ ಬಾರಿ ಕಂಬಳ ವೀಕ್ಷಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರಾವಳಿಯ ಈ ವೀರ ಕ್ರೀಡೆಗೆ ಮನಸೋತು, ಮೈಸೂರು ದಸರಾದಲ್ಲೂ ಕಂಬಳ ಆರಂಭಿಸುವ ಘೋಷಣೆ ಮಾಡಿದ್ದರು. ತಾಂತ್ರಿಕ ಕಾರಣಗಳಿಂದ ಕಳೆದ ಬಾರಿ ಇದು ಸಾಧ್ಯವಾಗದಿದ್ದರೂ, ಮುಂದಿನ ದಸರಾ ಉತ್ಸವದಲ್ಲಿ ಕಂಬಳಕ್ಕೆ ಅವಕಾಶ ಕಲ್ಪಿಸುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಇನಾಯತ್ ಅಲಿ ಈ ಸಂದರ್ಭದಲ್ಲಿ ಸ್ಮರಿಸಿದರು.

ಏಪ್ರಿಲ್ 4ರಂದು ಬೆಳಿಗ್ಗೆ 8:30ಕ್ಕೆ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಕಂಬಳವನ್ನು ಉದ್ಘಾಟಿಸಲಿದ್ದಾರೆ. ಸಂಜೆ 6:30ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಮಾಜಿ ಸಂಸದ ಬಮುಲ್ ಬೆಂಗಳೂರು ಅಧ್ಯಕ್ಷ ಡಿ.ಕೆ. ಸುರೇಶ್ ಉದ್ಘಾಟಿಸಲಿದ್ದು, ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್, ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸ್ಪರ್ಧಾಳುಗಳಿಗೆ ವಿಶೇಷ ಗೌರವ:
ಈ ಬಾರಿಯ ಕಂಬಳದಲ್ಲಿ ಭಾಗವಹಿಸುವ ಪ್ರತಿಯೊಂದು ಕೋಣಗಳ ಮಾಲೀಕರಿಗೆ ಬೆಳ್ಳಿಯ ನಾಣ್ಯ ಹಾಗೂ 30 ಕೆಜಿ ಹುರುಳಿಯನ್ನು ವಿತರಿಸಲಾಗುವುದು. ಅಲ್ಲದೆ, ಕಣೆಹಲಗೆ ವಿಭಾಗದಲ್ಲಿ ನಿಗದಿತ ಎತ್ತರಕ್ಕೆ ನೀರು ಹಾಯಿಸಿದ ಎಲ್ಲಾ ಕೋಣಗಳಿಗೆ ತಲಾ 1 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಇದರೊಂದಿಗೆ ಯಕ್ಷಗಾನ ಸಾಧಕರಿಗೆ ಸನ್ಮಾನ, ಫುಡ್ ಫೆಸ್ಟಿವಲ್, ಕೇರಳದ ಪ್ರಸಿದ್ಧ ಚೆಂಡೆವಾದನ ಮತ್ತು ಆಕರ್ಷಕ ಸುಡುಮದ್ದು ಪ್ರದರ್ಶನ ಕಂಬಳದ ಮೆರುಗು ಹೆಚ್ಚಿಸಲಿವೆ.

ಶಿಸ್ತು ಮುಖ್ಯ: ಗುಣಪಾಲ ಕಡಂಬ ಜಿಲ್ಲಾ ಕಂಬಳ ಸಮಿತಿ ಕಾರ್ಯದರ್ಶಿ ಗುಣಪಾಲ ಕಡಂಬ ಮಾತನಾಡಿ, ಒಂದು ಕಾಲದಲ್ಲಿ ಕಂಬಳ ಎನ್ನುವುದು ಕೇವಲ ಕ್ರೀಡೆಯಾಗಿರಲಿಲ್ಲ, ಅದು ಇಡೀ ತಿಂಗಳು ನಡೆಯುವ ಒಂದು ದೊಡ್ಡ ಜಾತ್ರೆಯಂತಿತ್ತು. ರೈತರಿಗೆ ಬೇಕಾದ ವಸ್ತುಗಳ ಕೊಡು-ಕೊಳ್ಳುವಿಕೆ ಮತ್ತು ಪರಸ್ಪರ ಗೌರವದ ವಿನಿಮಯಕ್ಕೆ ಅದೊಂದು ಪವಿತ್ರ ವೇದಿಕೆಯಾಗಿತ್ತು. ಕಂಬಳದ ಅಂಗಳದಲ್ಲಿ ಕೋಣಗಳನ್ನು ಓಡಿಸಲು ಬಿಟ್ಟ ಮೇಲೆ, ಓಡುವವರು ಮತ್ತು ಬಿಡುವವರನ್ನು ಹೊರತುಪಡಿಸಿ ಬೇರೆ ಯಾರೂ ಕೆರೆಯಲ್ಲಿ ಒಂದು ಹೆಜ್ಜೆ ಮುಂದಿಡಬಾರದು. ಕಂಬಳದ ಘನತೆಯನ್ನು ಉಳಿಸಲು ಸ್ವಯಂ ಶಿಸ್ತು ಅತ್ಯಂತ ಅಗತ್ಯ. ನಮ್ಮ ಈ ಮೂಳೂರು-ಅಡ್ಡೂರು ಕಂಬಳದಲ್ಲೂ ಅಂತಹ ಶಿಸ್ತನ್ನು ನಾವು ಕಾಪಾಡಿಕೊಳ್ಳಬೇಕು ಮತ್ತು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಈ ಕ್ರೀಡೆಯನ್ನು ಯಶಸ್ವಿಗೊಳಿಸಬೇಕು,” ಎಂದು ಅವರು ಕರೆ ನೀಡಿದರು.

ರಾಜ್ಯ ಕಂಬಳ ಅಸೋಸಿಯೇಷನ್ ಪದಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು ಮಾತನಾಡಿ, “ಈ ಬಾರಿ ಕಂಬಳದಲ್ಲಿ ಶಿಸ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಓಟದ ನಿಖರತೆಗಾಗಿ ಹೊಸ ತಂಡದ ಮೂಲಕ ‘ಸೆನ್ಸಾರ್’ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ” ಎಂದರು.

ಈ ವೇಳೆ ಕಂಬಳದ ಆಮಂತ್ರಣ ಪತ್ರಿಕೆಯನ್ನು ಇನಾಯತ್‌ ಸಹಿತ ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್‌, , ಮಾಜಿ ಉಪಮೇಯರ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಕೆಪಿಸಿಸಿ ಸದಸ್ಯ, ಸಮಿತಿ ಉಪಾಧ್ಯಕ್ಷ ತಾಪಂ ಸದಸ್ಯರಾಗಿದ್ದ ಆರ್‌ಕೆ ಪೃಥ್ವಿರಾಜ್, ಪ್ರಧಾನ ಕಾರ್ಯದರ್ಶಿ ಯಶವಂತ್‌ ಕುಮಾರ್‌ ಶೆಟ್ಟಿ ಬೆಳ್ಳೂರುಗುತ್ತು, ಕಾರ್ಯಾಧ್ಯಕ್ಷರು ಜಗದೀಶ್‌ ಶೆಟ್ಟಿ ಮಾಣಿಬೆಟ್ಟುಗುತ್ತು, ವ್ಯವಸ್ಥಾಪಕ ವಿನಯ ಕುಮಾರ್‌ ಶೆಟ್ಟಿ ಮಾಣಿಬೆಟ್ಟುಗುತ್ತು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular