ಮಂಗಳೂರು :
ಇನೋವಾ ಕಾರು ಖರೀದಿ ಮಾಡುವ ನೆಪದಲ್ಲಿ ₹8 ಲಕ್ಷಕ್ಕೂ ಅಧಿಕ ಮೊತ್ತ ವಂಚನೆ ಮಾಡಿರುವ ಆರೋಪ ಮಂಗಳೂರಿನ ಪಾಂಡೇಶ್ವರ ಮೂಲದ ತಾಯಿ–ಮಗಳ ಮೇಲೆ ಕೇಳಿಬಂದಿದೆ. ವಂಚನೆಗೆ ಒಳಗಾದ ವ್ಯಕ್ತಿ ಅಶ್ರಫ್ MRPL ಉದ್ಯೋಗಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ ಎಂದು ಆರೋಪಿಸಲಾಗಿದೆ.
ಪೀಡಿತ ವ್ಯಕ್ತಿಯ ಸ್ನೇಹಿತ ನಾದ ಗಂಗಾಧರ ಅವರು ಹರಿಯಾಣ ರಾಜ್ಯದಿಂದ HR-83-0630 ನಂಬರ್‌ನ ಇನೋವಾ ಕಾರನ್ನು ಖರೀದಿಸಿ ತಂದಿದ್ದರು. ನಂತರ ಕಾರು ಅವರಿಗೆ ಇಷ್ಟವಾಗದ ಕಾರಣ, ಅದನ್ನು ಮಾರಾಟ ಮಾಡಿ ಹಣ ಹಿಂತಿರುಗಿಸುವಂತೆ ಪೀಡಿತರಿಗೆ ಮನವಿ ಮಾಡಿದ್ದರು.
ಈ ನಡುವೆ, ದಿನಾಂಕ 1 ಏಪ್ರಿಲ್ 2025 ರಂದು ಪೀಡಿತರ ನೆರೆಹೊರೆಯ ಶಾಹಿದ್ ಎಂಬವರು ತಮ್ಮ ಪರಿಚಯದ ಗ್ರಾಹಕರಿದ್ದಾರೆ ಎಂದು ಹೇಳಿ, ಬೀ. ಫಾತಿಮ (ಪತಿ: ಅಬ್ದುಲ್ ಮಜಿದ್) ಹಾಗೂ ಅವರ ಮಗಳು ರೆಹಮತ್ (ಪತಿ: ಅಬ್ದುಲ್ ರೆಹಮಾನ್ ಅಶ್ಫಾಕ್) ಅವರನ್ನು ಪರಿಚಯಿಸಿದರು. ಆರೋಪಿಗಳು ಇನೋವಾ ಕಾರನ್ನು ₹8,60,000ಕ್ಕೆ ಖರೀದಿಸುವುದಾಗಿ ಒಪ್ಪಿಕೊಂಡರು.
ಮಂಗಳೂರು RTO ಯಲ್ಲಿ ತೆರಿಗೆ ಪಾವತಿಸಲು ಒಟ್ಟು ₹1,80,000 ಅಗತ್ಯವಿದ್ದು, ಅದರಲ್ಲಿ ₹60,000 ಮಾತ್ರ ತಮ್ಮ ಬಳಿ ಇದೆ, ಉಳಿದ ₹8 ಲಕ್ಷವನ್ನು ಶ್ರೀರಾಮ್ ಫೈನಾನ್ಸ್‌ನಿಂದ ಸಾಲ ಪಡೆದು ಕೊಡುತ್ತೇವೆ ಎಂದು ಭರವಸೆ ನೀಡಿದರು. ಸಮುದಾಯದ ಮಹಿಳೆಯರು ಎಂಬ ಕಾರಣಕ್ಕೆ ನಂಬಿದ ಪೀಡಿತರು ಕಾರು ವರ್ಗಾವಣೆಗೆ ಒಪ್ಪಿದರು.
ಹರಿಯಾಣ RTO ಯಿಂದ ಕಾರು ಎರಡನೇ ಆರೋಪಿ ರೆಹಮತ್ ಹೆಸರಿಗೆ ನೋಂದಾಯಿಸಿ, ನಂತರ KA-19-MQ-7027 ನಂಬರ್‌ಗೆ ವರ್ಗಾವಣೆ ಮಾಡಲಾಯಿತು. ಆದರೆ ಆರೋಪಿಗಳು ಶ್ರೀರಾಮ್ ಫೈನಾನ್ಸ್‌ನಿಂದ ₹8 ಲಕ್ಷ ಸಾಲ ಪಡೆದುಕೊಂಡರೂ ಆ ಹಣವನ್ನು ಪೀಡಿತರಿಗೆ ನೀಡದೆ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.
ಪೀಡಿತರು ಹಣ ಕೇಳಿದಾಗ ಸಾಲ ಸಿಗಲಿಲ್ಲ ಎಂದು ಸುಳ್ಳು ಹೇಳಿ ಕಾಲಹರಣ ಮಾಡುತ್ತಿದ್ದರು. ನಂತರ ಸಾಲ ಪಡೆದಿರುವುದು ತಿಳಿದ ಬಳಿಕ ಹಣ ಕೇಳಿದಾಗ, ಮೊದಲ ಆರೋಪಿ ಬೀ. ಫಾತಿಮ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ರೌಡಿಗಳ ಮೂಲಕ ಹಲ್ಲೆ ಮಾಡುವುದಾಗಿ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಎರಡನೇ ಆರೋಪಿ ರೆಹಮತ್ ಕೂಡ ಮನೆಗೆ ಬಂದರೆ ಕೈಕಾಲು ಮುರಿಸುವುದಾಗಿ ಬೆದರಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ಪೀಡಿತರು ದಿನಾಂಕ 15 ಜುಲೈ 2025 ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ 4 ಆಗಸ್ಟ್ ರಂದು ಹಿಂಬರವಣಿಗೆ ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದ್ದಾರೆ. ದಿನಾಂಕ 12 ಮತ್ತು 16 ಆಗಸ್ಟ್ 2025 ರಂದು ಠಾಣಾಧಿಕಾರಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮರುದೂರು ಹಾಗೂ ನೋಂದಾಯಿತ ಅಂಚೆಯ ಮೂಲಕ ಮನವಿ ಸಲ್ಲಿಸಿದರೂ ಕ್ರಮ ಜರುಗಿಸಿಲ್ಲ ಎನ್ನಲಾಗಿದೆ.
ಈ ನಡುವೆ ಆರೋಪಿಗಳು ಸೌದಿ ಅರೇಬಿಯಾ ಹಾಗೂ ಖತಾರ್ ದೇಶಗಳಿಗೆ ತೆರಳಿ ವಾಪಸ್ಸು ಬರುತ್ತಿರುವುದಾಗಿ ಪೀಡಿತರು ಆರೋಪಿಸಿದ್ದಾರೆ. ₹8 ಲಕ್ಷ ವಂಚನೆಗೆ ಒಳಗಾದರೂ ನ್ಯಾಯ ಸಿಗದೆ, ಇದೀಗ ನ್ಯಾಯಾಲಯದ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ.
ಪೊಲೀಸರು ಈ ಗಂಭೀರ ವಂಚನೆ ಹಾಗೂ ಕೊಲೆ ಬೆದರಿಕೆ ಪ್ರಕರಣದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬರುತ್ತಿದೆ.


