ಮಂಗಳೂರು : 1950 ರಿಂದ 1970ರ ದಶಕದವರೆಗೂ ಜನರು ಬಸಿಗಾಗಿ ಪರದಾಡುತ್ತಿದ್ದರು. ಆದರೆ ಇಂದು ನಿಮಿಷ ನಿಮಿಷಕ್ಕೆ, ಸೆಕೆಂಡು ಸೆಕೆಂಡಿಗೆ ನಮ್ಮ ಜಿಲ್ಲೆಯ ಮೂಲೆ ಮೂಲೆಗೆ, ಹಳ್ಳಿ ಹಳ್ಳಿಗೆ ಬತ್ತು ಸಂಚಾರವನ್ನು ಒದಗಿಸಿ ಜಿಲ್ಲೆಯ ಜನರಿಗೆ ಬಸ್ಸು ಸಂಚಾರದ ಚುರುಕನ್ನು ಮುಟ್ಟಿಸಿದ ಸಂಪೂರ್ಣ ಖ್ಯಾತಿ ಜಿಲ್ಲೆಯ ಖಾಸಗಿ ಬಸ್ತು ಮಾಲಕರಿಗೆ ಸಲ್ಲುತ್ತದೆ. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಕಾಲ ಬದಲಾಗಿದೆ. ಆರಂಭದಲ್ಲಿದ್ದ ಬಸ್ಸು ಕಂಪೆನಿಗಳು ನಷ್ಟದಿಂದ ನಶಿಸಿ ಹೋಗಿ ಹೊಸ ಮಾಲಕರು ಬಸ್ಸುಗಳನ್ನು ಹೊಂದಿ ಈಗ ನಷ್ಟವನ್ನು ಅನುಭವಿಸುತ್ತಾ ಇದ್ದಾರೆ. ಇಂದು ಸಾರಿಗೆ ವ್ಯವಸ್ಥೆ ಆತೀ ಯಶಸ್ವಿಗಳಿಸಿರುವುದು ಹೌದಾದರೆ ಅದು ಅವಿಭಜಿತ ದಕ್ಷಿಣ ಕನ್ನಡದಲ್ಲಿ ಮಾತ್ರ ಎಂದು ದ.ಕ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಯವರು ತಿಳಿಸಿದ್ದಾರೆ.
ಅವರು ನಗರದ ಗೋಲ್ಡ್ ಫಿಂಚ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು ತಮ್ಮ ಖಾಸಗಿ ಬಸ್ಸುಗಳು ಸಲ್ಲಿಸಿದ ಸೇವೆಯನ್ನು ನೆನೆಪಿಸಿದರು.ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಬಸ್ಸು ಸಂಚಾರ ವ್ಯವಸ್ಥೆಗೆ ಸುಮಾರು 110 ವರ್ಷಗಳ ಇತಿಹಾಸವಿರುತ್ತದೆ ಬಡ ಜನರ, ಕೂಲಿ ಕಾರ್ಮಿಕರ, ವಿದ್ಯಾರ್ಥಿಗಳ ಹಾಗೂ ಎಲ್ಲಾ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿ ಅತ್ಯುತ್ತಮ ಸಾರಿಗೆ ಎಂಬ ಹೆಗ್ಗಳಿಕೆಯೊಂದಿಗೆ ಸೇವೆಯನ್ನು ಎಲ್ಲಾ ರೂಟುಗಳಲ್ಲೂ ಕೃಪ್ತ ಸಮಯಕ್ಕೆ ಸರಿಯಾಗಿ ನೀಡುತ್ತಿದ್ದೇವೆ. ಹಾಗೂ ದ. ಕ. ಜಿಲ್ಲೆಯು ಇಷ್ಟೊಂದು ಸೊಗಸಾಗಿಯೂ, ಸುಂದರವಾಗಿಯೂ ಕಾಣುತ್ತಿರುವುದು ಹಾಗೂ ಇಡೀ ದೇಶದಲ್ಲಿಯೇ ಸಾರಿಗೆ ವ್ಯವಸ್ಥೆ ಇತರ ರಾಜ್ಯ, ಜಿಲ್ಲೆಗಳಿಗಿಂತ ಉತ್ತಮ ಹಾಗೂ ಆದರ್ಶ ಪ್ರಾಯವಾಗಿದೆ ಎಂಬುವುದು ದೇಶ ಒಪ್ಪಿಕೊಳ್ಳಬೇಕಾದಂತ ಸತ್ಯ ಎಂದರು.
ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಖಾಸಗಿ ಬಸ್ಸುಗಳ ಪಾತ್ರ ಅಪಾರ ನಮ್ಮ ಜಿಲ್ಲೆಯಲ್ಲಿ ಬೃಹತ್ ಸಂಖ್ಯೆಯ ಕೈಗಾರಿಕಾ ಕೇಂದ್ರಗಳು, ಹೆಚ್ಚಿನ ಸಂಖ್ಯೆಯ ಮತ್ತು ಉತ್ತಮ ದರ್ಜೆಯ ಶಾಲಾ ಕಾಲೇಜುಗಳು, ವಿಶ್ವ ವಿದ್ಯಾನಿಲಯಗಳು, ಮೆಡಿಕಲ್ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು, ಡೆಂಟಲ್ ಕಾಲೇಜುಗಳು ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಗಳು ಹಾಗೂ ಬೃಹತ್ ಸಂಖ್ಯೆಯಲ್ಲಿ ಖಾಸಗಿ ಆಸ್ಪತ್ರೆಗಳು ಬೆಳೆದು ನಿಲ್ಲಲು ಖಾಸಗಿ ಬಸ್ಸುಗಳು ನಿಮಿಷ ನಿಮಿಷಗಳಲ್ಲಿ ಜಿಲ್ಲೆಯ ಮೂಲೆ ಮೂಲೆಗೂ ಬಸ್ಸು ಸಂಚಾರ ನೀಡಿರುವುದೇ ಪ್ರಮುಖ ಕಾರಣ ಎಂದರು.
ಖಾಸಗಿ ಬಸ್ಸು ಉದ್ಯಮ ಸಂಕಷ್ಟದಲ್ಲಿದ್ದು ಉದ್ಯಮ ನಿಂತು ಹೋದಲ್ಲಿ ಬಸ್ಸುಗಳಲ್ಲಿ ದುಡಿಯುವ ಸಾವಿರಾರು ಕಾರ್ಮಿಕರು, ಡ್ರೈವರುಗಳು, ನಿರ್ವಾಹಕರುಗಳು, ಕ್ಲೀನರ್‌ಗಳು, ಪೆಟ್ರೋಲ್ ಬಂಕ್ ಮಾಲಕರು/ಸಿಬ್ಬಂದಿಗಳು, ಗ್ಯಾರೇಜ್ ಮಾಲಕರು /ಸಿಬ್ಬಂದಿಗಳು, ಟಯರ್ ರೀಟ್ರೆಡಿಂಗ್ ರಿಸೋಲ್ ಮಾಲಕರು ಮತ್ತು ಸಿಬ್ಬಂದಿಗಳು, ಬಸ್ಸು ಬಿಡಿ ಭಾಗಗಳ ವಿತರಕರುಗಳು, ಡೀಲರುಗಳು ತಮ್ಮ ಕೆಲಸವನ್ನು ಕಳೆದುಕೊಂಡು ನಿರ್ಗತಿಕರಾಗುತ್ತಾರೆ. ಮಾತ್ರವಲ್ಲದೆ ಇದನ್ನೇ ನಂಬಿ ಕೊಂಡಿರುವ ಹಲವಾರು ಕುಟುಂಬಗಳು ಬೀದಿ ಪಾಲಾಗುವುದು ಖಂಡಿತವಾಗಿದೆ ಎಂದರು.
ದ. ಕ. ಜಿಲೆಗೆ ಹೊರಗಿನಿಂದ ಬಂದ ಜನರು ಇಲ್ಲಿನ ನಿಮಿಷ ನಿಮಿಷಗಳಂ ಅಚ್ಚುಕಟ್ಟಾಗಿ ಸಂಚರಿಸುವ ಖಾಸಗಿ ಬಸ್ಸುಗಳನ್ನು ಕಂಡು ಆನಂದಗೊಂಡು ಬೆಕ್ಕಸ ಬೆರಗಾಗುತ್ತಾರೆ. ನಮ್ಮ ಬಸ್ ವ್ಯವಸ್ಥೆಯನ್ನು ಕಂಡು ರಾಯಪುರದ ಛತ್ತಿಸ್‌ಘಡ ಹಾಗೂ ಮಧ್ಯ ಪ್ರದೇಶದ ಭೂಪಾಲ್ ಎಂಬಲ್ಲಿ ಅಲ್ಲಿನ ಜನದ ಬೇಡಿಕೆಯಂತೆ ಅವಿಭಾಜಿತ ದ. ಕ. ಬಸ್ಸು ಮಾಲಕರು ಸಾರಿಗೆ ವ್ಯವಸ್ಥೆಯನ್ನು ನೀಡುತ್ತಿದ್ದಾರೆ. ಈಗಿರುವ ಖಾಸಗ ಬಸ್ತು ವ್ಯವಸ್ಥೆ ದೇಶದ ಇನ್ನಿತರ ಜಿಲ್ಲೆಗಳಿಂದ. ರಾಜ್ಯಗಳಿಂದ ಹಾಗೂ ಹೊರದೇಶಗಳಿಂದ ಬಂದ ಜನರ ಮೆಚ್ಚುಗೆಗೆ ಪಾತ್ರವಾಗಿದೆಯಲ್ಲದೆ ಜನರ ಮನೆಬಾಗಿಲ್ಲಲ್ಲೇ ಹತ್ತಿ ಇಳಿಸಿ ಕ್ಲಪ್ತ ಸಮಯಕ್ಕೆ ಬಸ್ಸುಗಳನ್ನು ಓಡಿಸುವ ಸುಗಮ ಹಾಗೂ ಸುಖಕರ ಪ್ರಯಾಣಕ್ಕೆ ಹೆಸರು ವಾಸಿಯಾಗಿದೆ. ಹೊರದೇಶದ ಉದ್ಯಮಿಗಳನ್ನು ನಾವು ಇಲ್ಲಿ ಉದ್ಯಮ ಸ್ಥಾಪನೆಗಾಗಿ ಆಹ್ವಾನಿಸುವ ಈ ಸನ್ನಿವೇಶದಲ್ಲಿ ನಮ್ಮ ದೇಶದಲ್ಲೇ ಮಾದರಿಯಾಗಿ ಉತ್ತಮ ಸೇವೆಯನ್ನು ಕೊಡುತ್ತಿರುವ ಹಲವಾರು ವರ್ಷಗಳ ನಮ್ಮ ಖಾಸಗಿ ಸಾರಿಗೆ ವ್ಯವಸ್ಥೆಯನ್ನು ಮುಂದುವರಿಸಿ ಕೊಂಡು ಹೋಗಲು ಆವಕಾಶ ಮಾಡಿ ಕೊಡಬೇಕು ಎಂದರು.
ಹೊಸ ಬಸ್ಸು ಒಂದಕ್ಕೆ ಮೂವತ್ತರಿಂದ ಮೂವತ್ತ ನಾಲ್ಕು ಲಕ್ಷದ ವರೆಗೆ ವ್ಯಯಿಸಿ ಒಂದು ಲಕ್ಷಕ್ಕೂ ಮೇಲ್ಪಟ್ಟು 1 ವರ್ಷಕ್ಕೆ ಇನ್ಸೂರೆನ್ಸ್ ಪ್ರೀಮಿಯಂ ಪಾವತಿಸಿ ಮೂರು ತಿಂಗಳಿಗೆ 40 ರಿಂದ 50 ಸಾವಿರದಷ್ಟು ಟ್ಯಾಕ್ಸ್ ಪಾವತಿಸಿ 1 ಲೀಟರ್ ಡಿಸೇಲ್‌ಗೆ 90.21 ರೂಪಾಯಿ ಪಾವತಿಸಿ, ಬ್ಯಾಂಕ್ ಇನ್ಸಾಲ್‌ಮೆಂಟ್ ತಿಂಗಳಿಗೆ 60 ಸಾವಿರ ಇದಲ್ಲದೆ ಮೆಂಟೆನನ್ಸ್ 80 ಸಾವಿರ ಪಾವತಿಸಿ ಬಸ್ಸು ಓಡಿಸುವುದು ತುಂಬಾ ಕಷ್ಟಕರವಾಗಿದೆ. ಈ ಸನ್ನಿವೇಶದಲ್ಲಿ 1 ರಿಂದ 5 ನಿಮಿಷ ಅಂತರದಲ್ಲಿ ಸಂಚಾರ ಮಾಡುತ್ತಿರುವ ನಮ್ಮ ಖಾಸಗಿ ಬಸ್ಸುಗಳ ಸಿಟಿ ರೂಟುಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ತಂದು ಅನಾರೋಗ್ಯಕರ ಪೈಪೋಟಿಗೆ ಅವಕಾಶ ಮಾಡಿ ಕೊಡದೆ ನಮ್ಮ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಕೆಎಸ್‌ಆರ್‌ಟಿಸಿ ರೂಟುಗಳಲ್ಲಿ ಟೆಂಪೋ ಮತ್ತು ಜೀಪಿನಲ್ಲಿ ಬಹಳ ಕಷ್ಟದಿಂದ ಜನರು ಪ್ರಯಾಣಿಸುತ್ತಿದ್ದಾರೆ ಅಂತಹ ಪ್ರದೇಶದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ಹಾಕಿ ಪ್ರಯಾಣಿಕರ ಸಮಸ್ಯೆಯನ್ನು ನಿವಾರಣೆ ಮಾಡುವುದು ಉತ್ತಮ. ಉತ್ತಮ ಸಾರಿಗೆ ವ್ಯವಸ್ಥೆ ಕೊಡುವಾಗ ನಮ್ಮಲ್ಲಿ ಬರುವ ಕುಂದು ಕೊರತೆಗಳ ಬಗ್ಗೆ ಸಾರ್ವಜನಿಕರಿಂದ ಬರುವ ದೂರುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಅದನ್ನು ಸರಿಪಡಿಸಿ ಸಾರ್ವಜನಿಕರಿಗೆ ಶಿಸ್ತುಬದ್ಧ, ಉತ್ತಮ ಸಂಚಾರ ಸೇವೆ ನೀಡಲು
ನಾವು ಬದ್ಧರಾಗಿದ್ದೇವೆ ಎಂದರು.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಸುರಕ್ಷಿತ ಸುಗಮ ಸಾರಿಗೆ ಸೇವೆಯನ್ನು ಸಂಘಟಿತವಾಗಿ ನೀಡುವ ಉದ್ದೇಶದೊಂದಿಗೆ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘವು 01/07/1981 ರಲ್ಲಿ ಹುಟ್ಟಿಕೊಂಡಿತು. ವಿದ್ಯಾರ್ಥಿ ಸಮುದಾಯದ ಏಳಿಗೆಗಾಗಿ, ವಿದ್ಯಾರ್ಜನೆಗೆ ಪ್ರೋತ್ಸಾಹ ನೀಡುವ ಏಕಮೇವ ಉದ್ದೇಶದಿಂದ ಶಾಲಾ ವಿದ್ಯಾರ್ಥಿಗಳಿಗೆ 75% ರಷ್ಟು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ 60% ರಷ್ಟು ರಿಯಾಯತಿ ದರದ ಪಾಸುಗಳನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕೊಡಲಾಗುತ್ತದೆ. ಈ ತನಕ ಸುಮಾರು 6,10,354 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಿಟಿ ಬಸ್ಸುಗಳಲ್ಲಿ ಈ ಸವಲತ್ತು ಪಡೆದಿದ್ದು, ಬಸ್ಸು ಮಾಲಕರು ವಿದ್ಯಾರ್ಥಿಗಳಿಗೆ 60% ಹಾಗೂ 75% ರಿಯಾಯತಿ ರೂಪದಲ್ಲಿ ಸುಮಾರು ರೂಪಾಯಿ ಹದಿನಾಲ್ಕು ಕೋಟಿ ಅರುವತ್ತೈದು ಲಕ್ಷ ತೊಂಬತ್ತೆರಡು ಸಾವಿರದ ನೂರ ಐವತ್ತೈದು (14,65,92,155) ಮಿಕ್ಕಿ ತಮ್ಮ ಆದಾಯವನ್ನು ತ್ಯಾಗ ರೂಪದಲ್ಲಿ ಕೊಡ ಮಾಡಿದ್ದಾರೆ. ದೇಶದ ಖಾಸಗಿ ಸಾರಿಗೆ ಕ್ಷೇತ್ರದಲ್ಲಿ ಎಲ್ಲಿಯೂ 60% ಹಾಗೂ 75% ರಿಯಾಯತಿಯನ್ನು ವಿದ್ಯಾರ್ಥಿಗಳಿಗೆ ಕೊಟ್ಟಿರುವುದಿಲ್ಲ ಎಂದು ಹೇಳಿದರು.
ಮನುಷ್ಯನ ಜೀವನಕ್ಕೆ ಮಾರಕವಾದ ಆರೋಗ್ಯಕರ ಜೀವನ ಶೈಲಿಗೆ ಮಾದಕ ವ್ಯಸನ ಅಡ್ಡಿಯಾಗಿದ್ದು ನಮ್ಮ ಜಿಲ್ಲೆಯಲ್ಲಿ ಈ ಡ್ರಗ್ಸ್ ಮಾಫಿಯಾವನ್ನು ಬಹುಮಟ್ಟಿಗೆ ಹತೋಟಿಗೆ ತಂದಂತಹ ನಮ್ಮ ಮಂಗಳೂರಿನ ಪೊಲೀಸ್ ಕಮಿಷನರ್ ಆದಂತಹ ಶ್ರೀ ಸುಧೀರ್ ಕುಮಾರ್ ರೆಡ್ಡಿಯವರನ್ನು ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘವು ಅಭಿನಂದಿಸಿದರು. ಹಾಗೂ ಅವರನ್ನು ತುಂಬು ಹೃದಯದಿಂದ ಪ್ರಶಂಸಿಸುತ್ತದೆ. ಜಿಲ್ಲೆಯಲ್ಲಿ ಡ್ರಗ್ಸ್ ವಿರುದ್ಧ ಪೊಲೀಸ್ ಇಲಾಖೆ ಸಮರ ಸಾರಿರುವುದರಿಂದ ಸಾರ್ವಜನಿಕರು ಹೆಮ್ಮೆ ಪಡುವಂತಾಗಿದೆ. ಇಂತಹ ದಕ್ಷ ಅಧಿಕಾರಿಗಳು ಜಿಲ್ಲೆಯಲ್ಲಿ ಇರಬೇಕು. ಪೊಲೀಸ್ ಇಲಾಖೆಗೆ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘವು ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ. ಮಾತ್ರವಲ್ಲದೆ ತಾರೀಕು 27.01.2026ರ ಮಂಗಳವಾರದದು ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘವು ಪೊಲೀಸ್ ಇಲಾಖೆ ಹಾಗೂ ರೋಶನಿ ನಿಲಯ ವಿದ್ಯಾಸಂಸ್ಥೆಯ ಅಪರಾಧಶಾಸ್ತ್ರ ವಿಭಾಗದ ಮುಖ್ಯಸ್ಥ ಸಾರಿಕ್ ಅಂಕಿತ ಹಾಗೂ ಅವರ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಮಂಗಳೂರು ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಾರಂಭಗೊಂಡು ಲಾಲ್‌ಬಾಗ್, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ ಬಾರ್ಡರ್ ಬಸ್ ನಿಲ್ದಾಣಗಳಲ್ಲಿ ಮಾದಕ ದ್ರವ್ಯ ವಿರುದ್ಧ ಜನ ಜಾಗೃತಿ (ಬೀದಿ ನಾಟಕ) ಕಾರ್ಯಕ್ರಮವನ್ನು ಹಮ್ಮಿಕೊಂಡು ಎಲ್ಲಾ ಬಸ್ಸುಗಳಲ್ಲಿಯೂ ಸ್ಟಿಕ್ಕರ್ ಹಾಕಿಕೊಂಡು ಜಿಲ್ಲೆಯ ಪ್ರಮುಖ ಕೇಂದ್ರ ಪ್ಲೆಕ್ಸ್ ಹಾಕಿ ದಕ್ಷಿಣ ಕನ್ನಡ ಬಸ್ಸು ಮಾಲಕರ ಸಂಘವು ಕಾರ್ಯಕ್ರಮವನ್ನು ಸಂಯೋಜಿಸಿದೆ ಎಂದು ತಿಳಿಸಿದರು. ದ. ಕ. ಬಸ್ಸು ಮಾಲಕರ ಸಂಘದಿಂದ ಪ್ರತಿ ವರ್ಷವೂ ನಮ್ಮ ಚಾಲಕ, ನಿರ್ವಾಹಕರಿಗೆ ಶಿಬಿರವನ್ನು ನಡೆಸಿ ಇದರಲ್ಲಿ ಪ್ರಮುಖ ವ್ಯಕ್ತಿಗಳು ಭಾಗವಹಿಸಿ ಚಾಲಕ, ನಿರ್ವಾಹಕರಿಗೆ ಸಂಚಾರಣ ಮಾರ್ಗದರ್ಶನವನ್ನು ನೀಡುತ್ತಿದ್ದೇವೆ ಎಂದರು.
ನಗರದ ಕೆಲವು ರಸ್ತೆಯಲ್ಲಿ ಕಾಲೇಜ್‌ಗಳ ಬಸ್ಸುಗಳನ್ನು ವಾಹನ ಹೋಗುವ ರಸ್ತೆಯಲ್ಲಿ ಕಾಮಗಾರಿ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ. ಕರಾವಳಿ ವೃತ್ತದಿಂದ ಅಂಬೇಡ್ಕರ್ ಸರ್ಕಲ್ ವರೆಗೆ ಮಾರ್ಗದ ಇಕ್ಕೆಲಗಳಲ್ಲೂ ವಾಹನವನ ಮಾಡುತ್ತಿದ್ದು ಸುಗಮ ಸಂಚಾರಕ್ಕೆ ತಡೆಯುಂಟಾಗುತ್ತದೆ. ಫನ್ನೀರ್ ರಸ್ತೆಯಲ್ಲಿ ಕಂಕನಾಡಿಯಿಂದ ಮಿಲಾಗ್ರಿಸ್ ಚರ್ಚ್ ವರೆಗೆ ರಸ್ತೆಯು ಕಿರಿದಾಗಿದ್ದರು ಎರಡೂ ಕಡೆಯಿಂದ ಕಾರುಗಳನ್ನು ಪಾರ್ಕ್ ಮಾಡುತ್ತಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ ನಗರದ ರಾವ್ & ರಾವ್ ವೃತ್ತದ ಬಳಿ ಟ್ರಾಫಿಕ್ ವ್ಯವಸ್ಥೆಯಲ್ಲಿ ಸಮಸ್ಯೆಯಿದೆ. ನಗರದ ಬಹುತೇಕ ಬಸ್ಸು ಸ್ಟಾಪ್ ಗಳಲ್ಲಿ ರಿಕ್ಷಾಗಳನ್ನು ಪಾರ್ಕ್ ಮಾಡುತ್ತಿದ್ದು, ಬಸ್ಸುಗಳನ ಎಡಬದಿಗೆ ತರುವರೇ ತೊಂದರೆಯಾಗುತ್ತದೆ ಎಂದರು.
ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿದ್ದು ಇಲ್ಲಿ ಸರಿಯಾದ ಸರ್ವಿಸ್ ರಸ್ತೆ ಮಾಡದ ಇರುವುದರಿಂದ ಅನೇಕ ಸಮಸ್ಯೆಗಳು ಈ ಸಂಚಾರ ದಟ್ಟಣೆಗೆ ಕಾರಣವಾಗಿರುತ್ತದೆ. ಅಲ್ಲದೆ ಲಾರಿ, ಬುಲೆಟ್ ಟ್ಯಾಂಕರುಗಳೆಲ್ಲ ಹೈವೆ ಬದಿಯಲ್ಲಿಯೇ ನಿಲ್ಲುವುದರಿಂದ ಕೂಡ ಈ ಸಂಚಾರಕ್ಕೆ ಅಡಚಣೆಯಾಗಿರುತ್ತದೆ. ಕೆಲವು ವರ್ಷಗಳ ಹಿಂದೆ ಜಿಲ್ಲಾಧಿಕಾರಿಯವರು ಹೊರಡಿಸಿದ ಸುತ್ತೋಲೆಯಂತೆ ಬುಲೆಟ್ ಟ್ಯಾಂಕರು ಹಾಗೂ ದೊಡ್ಡ ದೊಡ್ಡ ಲಾರಿಗಳು ಹಗಲು ಹೊತ್ತಿನಲ್ಲಿ ಹೈವೆಯಲ್ಲಿ ಸಂಚಾರ ದಟ್ಟಣೆಯಿರುವ ಸಮಯದಲ್ಲಿ ಸಂಚರಿಸಬಾರದೆಂದ ಆದೇಶ ಹೊರಡಿಸಿದ್ದಾರೆ. ಈ ಆದೇಶದಂತೆ ಸದ್ರಿ ವಾಹನಗಳ ಸಂಚಾರ ಸ್ಥಗಿತಗೊಳಿಸಿದ್ದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವುದು.ನಗರದಲ್ಲಿ ಹೆಚ್ಚಿನ ಕಡೆ ಬಸ್ ಬೇ ಗಳು ಇಲ್ಲದೇ ಇರುವುದರಿಂದ ಬಸ್ಸುಗಳನ್ನು ನಿಲ್ಲಿಸುವುದು ಹಾಗೂ ಪ್ರಯಾಣಿಕರನ್ನು ಹತ್ತಿಸಿ ಇಳಿಸುವುದು ತುಂಬಾ ಕಷ್ಟಕರ ಹಾಗೂ ಇದರಿಂದ ರಸ್ತೆಗಳಲ್ಲು ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಅದರಲ್ಲೂ ಕೆಎಸ್ ರಾವ್ ರಸ್ತೆ, ಬಂಟ್ಸ್ ಹಾಸ್ಟೇಲ್, ಬಲ್ಮಠದಿಂದ ಕಂಕನಾಡಿ ಕರಾವಳಿ ಸರ್ಕಲ್ ತನಕ ಅಲ್ಲಿಂದ ಪಂಪ್‌ವೆಲ್ ತನಕ ವಿಪರೀತ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಇದಕ್ಕೆ ಪ್ರಮುಖ ಕಾರಣ ರಸ್ತೆಯ ಎರಡೂ ಬದಿಯಲ್ಲಿ ಲಘು ವಾಹನಗಳ ಪಾರ್ಕಿಂಗ ಮುಖ್ಯ ಕಾರಣ. ಅಲ್ಲದೇ ಬಂಟ್ಸ್ ಹಾಸ್ಟೆಲ್, ಕರಂಗಲ್ ಪಾಡಿ, ಎಮ್ ಜಿ ರಸ್ತೆ, ಕೆಎಸ್‌ಆರ್‌ಟಿಸಿ, ನಂತೂರು, ಕೆಪಿಟಿಯಿಂದ ಪದುವ ಸ್ಕೂಲ್ ತುಂಬಾ ಸಂಚಾರ ದಟ್ಟಣೆಯಾಗಿರುತ್ತದೆ. ಹಾಗೂ ಫನ್ನೀರ್ ನಿಂದ ಕಂಕನಾಡಿ ತನಕ ಎರಡು ಕಡೆ ರಸ್ತೆಗಳಲ್ಲಿ ಕಾರುಗಳು ಪಾರ್ಕಿಂಗ್ ಮಾಡಿರುವುದರಿಂದ ಹಲವು ತಾಸುಗಳ ವರೆಗೆ ಸಂಚಾರ ಅಸ್ತವ್ಯಸ್ತವಾಗಿರುತ್ತವೆ.
ಕುಂಟಿಕಾನ, ಕೊಟ್ಟಾರ ಚೌಕಿ, ಕೂಳೂರು ಹಳೆ ಸೇತುವೆಯಲ್ಲೂ ವಿಪರೀತ ವಾಹನಗಳ ದಟ್ಟಣೆಯಾಗಿರುವುದರಿಂದ ವಾಹನ ಸಂಚಾರ ವ್ಯವಸ್ಥೆ ಬಹಳ ಕಷ್ಟಕರವಾಗಿದೆ. ಜನರಿಗೆ ನಡೆದು ಕೊಂಡು ಹೋಗಲು ಕೆಲವು ಕಡೆ ಸರಿಯಾದ ಪುಟ್ ಪಾತ್ ಗಳೇ ಇಲ್ಲದೆ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕ ರಸ್ತೆಯಲ್ಲಿಯೇ ನಡೆದು ಕೊಂಡು ಹೋಗುವುದರಿಂದ ರಸ್ತೆಯಲ್ಲಿ ಸುರಕ್ಷತೆ ಇಲ್ಲದಾಗಿದೆ.ನಗರದ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ತಳ್ಳುಗಾಡಿ ವ್ಯಾಪಾರ ಮಾಡುವುದರಿಂದ ಅದನ್ನು ತೆಗೆದ ಕೊಳ್ಳಲು ಬರುವ ಗ್ರಾಹಕರು ತಮ್ಮ ವಾಹನವನ್ನು ರಸ್ತೆಯ ಬದಿಯಲ್ಲಿಯೇ ನಿಲ್ಲಿಸುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ‘ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಗೂಡ್ಸ್ ಟೆಂಪೋಗಳು ವಿಪರೀತ ಉದ್ದುದ್ದ ಪೈಪುಗಳನ್ನು, ಸರಳುಗಳನ್ನು ಹಾಕಿಕೊಂಡು ಅಪಾಯಕಾರಿಯಾಗಿ ಬರುವುದು ಸುರಕ್ಷಿತ ಸಂಚಾರ ವ್ಯವಸ್ಥೆಗೆ ಸಮಸ್ಯೆಯಾಗಿದೆ ಎಂದು ಬಸ್ಸು ಚಾಲಕರ ಸಮಸ್ಯೆಗಳನ್ನು ಹೇಳಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ ರಾಮಚಂದ್ರ ನಾಯ್ಕ , ರಾಮಚಂದ್ರ ಪಿಲಾರ್ ಹಾಗೂ ಜೊತೆ ಕಾರ್ಯದರ್ಶಿ ರಾಜೇಶ್ ಟಿ ಯವರು ಉಪಸ್ಥಿತರಿದ್ದರು


