ಬೆಂಗಳೂರು : ರಾಜ್ಯದ 980 ಗ್ರಾಮ ಪಂಚಾಯತ್‌ಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಖಾಲಿ ಖಾಲಿಯಾಗಿದ್ದು ಇದರಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ನೈರ್ಮಲ್ಯ ಸೇರಿದಂತೆ ವಿವಿಧ ಯೋಜನೆಗಳ ಸೇವೆ ತಲುಪಿಸಲು ಹಿನ್ನಡೆಯಾಗುತ್ತಿದೆ.
ಖಾಯಂ ಅಧಿಕಾರಿಗಳು ಇಲ್ಲದೆ, ಗ್ರಾಮ ಪಂಚಾಯತ್‌ಗಳಲ್ಲಿ ಪ್ರಭಾರಿಗಳದ್ದೆ ರಾಜ್ಯಭಾರ ಆಗಿದೆ. ರಾಜ್ಯದಲ್ಲಿ ಒಟ್ಟು 5,953 ಗ್ರಾಮ ಪಂಚಾಯಿತಿಗಳಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರು, ರಸ್ತೆ, ಬೀದಿ ದೀಪ, ನೈರ್ಮಲ್ಯ, ವಸತಿ, ಪಿಂಚಣಿ, ಕೃಷಿ, ಮಹಿಳಾ ಸಬಲೀಕರಣ, ಸ್ವಚ್ಛ ಭಾರತ್ ಮಿಷನ್, ಡಿಜಿಟಲ್ ಸೇವೆಗಳು ಸೇರಿದಂತೆ ವಿವಿಧ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಕೆಲಸ ಮಾಡುತ್ತದೆ. ಆದರೆ, ಪಿಡಿಓಗಳಿಲ್ಲದೆ ಈ ಸೇವೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ಸಿಗದಂತಾಗಿವೆ.
ರಾಜ್ಯದ ಬಹಳಷ್ಟು ಗ್ರಾ.ಪಂಗಳಲ್ಲಿ ಜನಪ್ರತಿನಿಧಿಗಳ ಅಧಿಕಾರ ಅವಧಿಯು ಮುಕ್ತಾಯದ ಹಂತ ತಲುಪಿದೆ. ಕೆಲ ಗ್ರಾ.ಪಂಗಳಲ್ಲಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ಅವಧಿ ಡಿಸೆಂಬರ್‌ಗೆ ಮುಕ್ತಾಯಗೊಂಡಿದೆ. ಇನ್ನು ಕೆಲ ಗ್ರಾ.ಪಂಗಳಲ್ಲಿ ಫೆಬ್ರವರಿ ವೇಳೆಗೆ ಮುಕ್ತಾಯಗೊಳ್ಳಲಿದೆ. ಈಗಾಗಲೇ ಪಿಡಿಒ ಕೊರತೆ ಎದುರಿಸುತ್ತಿರುವ ಗ್ರಾ.ಪಂಗಳು, ಚುನಾವಣೆ ನಡೆದು ಹೊಸ ಜನಪ್ರತಿನಿಧಿಗಳು ಬರುವವರೆಗೂ ಮತ್ತಷ್ಟು ಸವಾಲು ಎದುರಿಸುವ ಸಾಧ್ಯತೆಯಿದೆ. ಪಿಡಿಒಗಳು, ಜನಪ್ರತಿನಿಧಿಗಳು ಇಲ್ಲದೇ ಕೆಲಸಗಳು ನಡೆಯುವುದು ಅನುಮಾನ ಎಂಬAತಾಗಿದೆ.
ಗ್ರಾಮ ಪಂಚಾಯತ್‌ಗಳಲ್ಲಿ ಮನರೇಗಾ ಯೋಜನೆಯಡಿಯಲ್ಲಿ ಪ್ರತಿವರ್ಷ ಹಲವಾರು ಜನಪರ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತದೆ. ಆದರೆ, ಅಧಿಕಾರಿಗಳು ಇಲ್ಲದೆ ಕೆಲವು ಪಂಚಾಯಿತಿಗಳಲ್ಲಿ ನಿಗಧಿತ ಗುರಿಗಿಂತ ಕಡಿಮೆ ಪ್ರಮಾಣದಲ್ಲಿ ಕೆಲಸಗಳಾಗಿವೆ. ಇನ್ನು ಬೇಸಿಗೆ ಸಮೀಪಿಸುತ್ತಿದ್ದು, ಆ ಸಂದರ್ಭ ಎದುರಾಗುವ ಸಮಪರ್ಕ ನೀರು ಪೂರೈಕೆ ಇನ್ನಿತರ ಕೆಲಸಗಳೂ ಕಷ್ಟವಾಗುವ ಸಾಧ್ಯತೆಯಿದೆ. ಆದ್ದರಿಂದ ಸರ್ಕಾರ ನಿರ್ಲಕ್ಷಯ ವಹಿಸದೆ, ಆದ್ಯತೆ ಮೇರೆಗೆ ಪಿಡಿಓಗಳನ್ನು ನೇಮಕ ಮಾಡಿಕೊಂಡು ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಬೇಕೆಂಬುವುದು ಜನರ ಕಳಕಳಿ ಆಗಿದೆ.
ನೇಮಕಕ್ಕೆ ಆದ್ಯತೆ ನೀಡಿ
ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಓಗಳ ಕೊರತೆಯಿಂದಾಗಿ ಬಹುತೇಕ ಅಭಿವೃದ್ಧಿ ಕೆಲಸಗಳು ಹಿನ್ನಡೆ ಆಗುತ್ತಿವೆ. ಇನ್ನು ೧೫೦ ರಿಂದ ೨೦೦ ಗ್ರಾಮ ಪಂಚಾಯತ್‌ಗಳ ಪಿಡಿಓಗಳಿಗೆ ಹೆಚ್ಚುವರಿಯಾಗಿ ೨-೩ ಪಂಚಾಯತ್‌ಗಳ
ಜವಬ್ದಾರಿ ನೀಡಲಾಗಿದೆ. ಇದರಿಂದ ಅಧಿಕಾರಿಗಳು ಒತ್ತಡದಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಪ್ರಭಾರಿ ಪಿಡಿಓಗಳು ಕಚೇರಿಗೆ ಸರಿಯಾಗಿ ಬಾರದೆ ನೆಪ ಹೇಳಿಕೊಂಡು ಓಡಾಡುತ್ತಿದ್ದಾರೆ. ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಕರೆ ಮಾಡಿದರೆ, ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ. ಗ್ರಾಮಗಳಲ್ಲಿ
ಯಾವುದೇ ಒಂದು ಅಭಿವೃದ್ಧಿ ಕೆಲಸವಾಗುತ್ತಿಲ್ಲ. ಕನಿಷ್ಠ ತಮ್ಮ ಸಮಸ್ಯೆಗಳನ್ನಾದರೂ ಕೇಳಲು ಅಧಿಕಾರಿ ಇಲ್ಲ ಎಂದು ನಾಗರಿಕರು ತಮ್ಮ ಅಳಲನ್ನು ವ್ಯಕ್ತಪಡಿಸಿ, ಸರ್ಕಾರ ಆದಷ್ಟು ಬೇಗ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೇಮಕಕ್ಕೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.


