Friday, January 16, 2026
Flats for sale
Homeಜಿಲ್ಲೆಮಂಗಳೂರು : ಮ.ನ.ಪಾಲಿಕೆಯ ಸಹಾಯಕ ಕಾನೂನು ಸಲಹೆಗಾರ ನೇಮಕಾತಿಯಲ್ಲಿ ಅಕ್ರಮ,ಬಹಿರಂಗಪಡಿಸಿದ ಕಿರಿಯ ಅಧಿಕಾರಿ ವರ್ಗ,ಹಿರಿಯ ಅಧಿಕಾರಿ...

ಮಂಗಳೂರು : ಮ.ನ.ಪಾಲಿಕೆಯ ಸಹಾಯಕ ಕಾನೂನು ಸಲಹೆಗಾರ ನೇಮಕಾತಿಯಲ್ಲಿ ಅಕ್ರಮ,ಬಹಿರಂಗಪಡಿಸಿದ ಕಿರಿಯ ಅಧಿಕಾರಿ ವರ್ಗ,ಹಿರಿಯ ಅಧಿಕಾರಿ ಸೇಫ್!

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಗೆ ಸಹಾಯಕ ಕಾನೂನು ಸಲಹೆಗಾರ ನೇಮಕಾತಿಯಲ್ಲಿ ನಡೆದಿರುವ ಅಕ್ರಮವನ್ನು ಬಯಲು ಮಾಡಿದ ಪಾಲಿಕೆ ಅಡಳಿತ ಅಧಿಕಾರಿ(ಅಡಳಿತ) ವಾಣಿ ವಿ.ಆಳ್ವ ಅವರನ್ನು ಸರ್ಕಾರ ಏಕಾಏಕಿ ವರ್ಗಾವಣೆ ಮಾಡಿದೆ. ಹಿರಿಯ ಅಧಿಕಾರಿಯನ್ನು ಮಾತ್ರ ರಕ್ಷಿಸಲಾಗಿದೆ.

ಪಾಲಿಕೆಯ ಸಹಾಯಕ ಕಾನೂನು ಸಲಹೆಗಾರರಾಗಿರುವ ಅಂಜಲಿ ವಿಶ್ವನಾಥ್ ಅವರು ಪಾಲಿಕೆಯ ಆಯುಕ್ತರು ಹಾಗೂ ಅಡಳಿತ ಅಧಿಕಾರಿ(ಅಡಳಿತ) ವಿರುದ್ಧ ಡಿ.16ರಂದು ಜಿಲ್ಲಾಧಿಕಾರಿ ಹಾಗೂ ಸಚಿವರಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಸಂಬಂಧ ವಿವರಣೆ ನೀಡುವಂತೆ ವಾಣಿ ವಿ.ಆಳ್ವ ಅವರಿಗೆ ಆಯುಕ್ತರು ಡಿ.18ರಂದು ಕೋರಿದ್ದರು. ಅಂದೇ ವಿವರಣೆ ನೀಡಿದ ಆಳ್ವ ಅವರು, ಪಾಲಿಕೆ ಸಹಾಯಕ ಕಾನೂನು ಸಲಹೆಗಾರ ನೇಮಕಾತಿಯೇ ಅಕ್ರಮ, ಸಂದರ್ಶನದಲ್ಲಿ ಬಾಹ್ಯ ಒತ್ತಡಗಳಿಗೆ ಮಣಿದು ಹೆಚ್ಚು ಅಂಕಗಳನ್ನು ನೀಡುವ ಮೂಲಕ ಪಕ್ಷಾಪಾತವೆಸಗಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದರು. ಪಾಲಿಕೆಯ ವಲಯ 1ರ ಆಯುಕ್ತರೂ ಆಗಿರುವ ವಾಣಿ ಅವರನ್ನು ಅಂದೇ ಸಂಜೆ ಎತ್ತಂಗಡಿ ಮಾಡಲಾಗಿದೆ. ವರ್ಗಾವಣೆ ಅದೇಶ ಸುದ್ದಿ ತಿಳಿಯುತ್ತಿದ್ದಂತೆ ವಾಣಿ ಅವರು ರಜೆ ಮೇಲೆ ತೆರಳಿದ್ದಾರೆ.

ಈ ನಡುವೆ ಕಾನೂನು ಸಲಹೆಗಾರರನ್ನು ತಕ್ಷಣ ರಿಲೀವ್ ಮಾಡುವಂತೆ ಮತ್ತೆ ಬಂದ ಒತ್ತಡಕ್ಕೆ ಮಣಿದ ಪಾಲಿಕೆ ಆಯುಕ್ತರು, ರಿಲೀವ್ ಆರ್ಡರ್ ಅನ್ನು ರಿಜಿಸ್ಟರ್ ಅಂಚೆ ಮೂಲಕ ರವಾನಿಸಿದ್ದಾರೆ. ಅದರೆ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ತನ್ನ ವರ್ಗಾವಣೆಯನ್ನು ಪ್ರಶ್ನಿಸಿ ವಾಣಿ ಅಳ್ವ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.

ವಲಯ ಆಯುಕ್ತ ವಾಣಿ ವಿ.ಅಳ್ವ ಅವರನ್ನು ಏಕಾಏಕಿ ವರ್ಗಾವಣೆ ಮಾಡಿರುವ ಬಗ್ಗೆ ಪಾಲಿಕೆಯ ಪೌರ ಕಾರ್ಮಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಕ್ಷಣ ವರ್ಗಾವಣೆಯನ್ನು ರದ್ದುಗೊಳಿಸದಿದ್ದರೆ ಎಲ್ಲ ಪೌರ ಕಾರ್ಮಿಕರು ನಗರದಲ್ಲಿನ ಸ್ವಚ್ಚತಾ ಕಾರ್ಯವನ್ನು ಸ್ಥಗಿತಗೊಳಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ, ಜಿಲ್ಲಾ ಉಸ್ತುವಾರಿ ಸಚಿವ, ಪೌರಾಡಳಿತ ಸಚಿವರಿಗೆ ಮನವಿ ಸಲ್ಲಿಸಿರುವ ಮಂಗಳೂರು ಪಾಲಿಕೆ ಪೌರ ಕಾರ್ಮಿಕ ಹಾಗೂ 4ನೇ ದರ್ಜೆ ನೌಕರರ ಸಂಘ, ವಾಣಿ ವಿ.ಆಳ್ವ ಅವರು ಪೌರಕಾರ್ಮಿಕರ ಹಿತರಕ್ಷಣೆಗೆ ಸಾಕಷ್ಟು ಕ್ರಮಗಳನ್ನು ಅನುಸರಿಸಿದ್ದರು. ಹಿಂದೆ ಇದ್ದ ಅಧಿಕಾರಿಗಳು ಪೌರಕಾರ್ಮಿಕರಿಗೆ ಸಾಕಷ್ಟು ತೊಂದರೆ ನೀಡಿದ್ದರು. ಹಾಗಾಗಿ ಯಾವುದೇ ಕಾರಣಕ್ಕೆ ವಾಣಿ ಆಳ್ವ ಅವರನ್ನು ವರ್ಗಾಯಿಸಬಾರದು ಎಂದು ಮನವಿ ಮಾಡಿದೆ.

ಪಾಲಿಕೆ ಕಾನೂನು ಸಹಾಯಕ ಸಲಹೆಗಾರರ ನೇಮಕಾತಿಯೇ ಅಕ್ರಮ ಎಂದು ಅಡಳಿತ ಅಧಿಕಾರಿ(ಅಡಳಿತ) ಪಾಲಿಕೆ ಆಯುಕ್ತರಿಗೆ ವಿವರಣೆ ನೀಡುತ್ತಿದ್ದಂತೆ ಕಾರ್ಯಪ್ರವೃತ್ತವಾದ ಬಾಹ್ಯಶಕ್ತಿ ಆಯುಕ್ತರ ಮೂಲಕ ವಾಣಿ ವಿ.ಆಳ್ವ ಅವರನ್ನು ಕೆಲವೇ ಗಂಟೆಗಳಲ್ಲಿ ವರ್ಗಾವಣೆ ಮಾಡುವಲ್ಲಿ ಯಶಸ್ಸು ಕಂಡಿದೆ. ಅಕ್ರಮ ನೇಮಕಾತಿ ಮಾಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳೇ ವಿವರಣೆ ನೀಡಿದಾಗ ಆ ಬಗ್ಗೆ ಕ್ರಮ ಕೈಗೊಳ್ಳದ ಸರ್ಕಾರ, ಅಕ್ರಮ ಬಯಲು ಮಾಡಿದ ಅಧಿಕಾರಿಯನ್ನು ಶಿಕ್ಷೆಗೆ ಒಳಪಡಿಸಿದೆ. ನೇಮಕಾತಿ ಮಾಡಿದ ಅಧಿಕಾರಿಯನ್ನು ರಕ್ಷಿಸುವ ಕೆಲಸ ಮಾಡಿದೆ. ಕೆಲವೇ ಗಂಟೆಯಲ್ಲಿ ವರ್ಗಾವಣೆ, ತಕ್ಷಣದಲ್ಲಿ ರಿಲೀವ್ ಆರ್ಡರ್.. ಸೂಪರ್‌ಫಾಸ್ಟ್ ಕೆಲಸ ನಡೆದಿದೆ. ಪಾಲಿಕೆಯಲ್ಲಿ ಜನಸಾಮಾನ್ಯರಿಗೆ ಸಂಬಂಧಿಸಿದ ಯಾವುದೇ ಕೆಲಸಗಳು ಈವರೆಗೆ ಇಷ್ಟು ವೇಗದಲ್ಲಿ ನಡೆದ ಒಂದೇ ಒಂದು ಉದಾಹರಣೆಗಳಿಲ್ಲ ಎಂಬ ಮಾಹಿತಿ ದೊರೆತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular