Friday, January 16, 2026
Flats for sale
Homeರಾಜ್ಯಹುಬ್ಬಳ್ಳಿ : ಶೀತಗಾಳಿ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಮಾರ್ಗಸೂಚಿ ಪ್ರಕಟ : ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತದ...

ಹುಬ್ಬಳ್ಳಿ : ಶೀತಗಾಳಿ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಮಾರ್ಗಸೂಚಿ ಪ್ರಕಟ : ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತದ ಸೂಚನೆ.

ಹುಬ್ಬಳ್ಳಿ ; ರಾಜ್ಯಾದ್ಯಂತ ಪ್ರಸ್ತುತ ಬೀಸುತ್ತಿರುವ ತೀವ್ರ ಶೀತಗಾಳಿಯ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಗತ್ಯ ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಶೀತಗಾಳಿಯಿಂದಾಗುವ ಆರೋಗ್ಯ ಸಮಸ್ಯೆಗಳು ಹಾಗೂ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಸಾರ್ವಜನಿಕರು ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸೂಚಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ತಿಳಿಸಿರುವಂತೆ, ಅನಗತ್ಯವಾಗಿ ಹೊರ ಹೋಗದೆ
ಸಾಧ್ಯವಾದಷ್ಟು ಮನೆಯೊಳಗೇ ಇರುವಂತೆ ಸಲಹೆ ನೀಡಲಾಗಿದೆ. ದೇಹಕ್ಕೆ ಅಗತ್ಯ ಶಾಖ ಪೂರೈಸಲು ಆರೋಗ್ಯಕರ ಆಹಾರ ಸೇವಿಸಬೇಕು ಹಾಗೂ ನಿರ್ಜಲೀಕರಣ ತಪ್ಪಿಸಲು ಅಲ್ಕೋಹಾಲ್ ರಹಿತ ಪಾನೀಯಗಳನ್ನು ಹೆಚ್ಚಾಗಿ ಸೇವಿಸುವಂತೆ ತಿಳಿಸಲಾಗಿದೆ. ಒಂದು ಪದರದ ಭಾರವಾದ ಬಟ್ಟೆಗಳ ಬದಲು ಹಲವಾರು ಪದರಗಳ ಹಗುರವಾದ ಹಾಗೂ ಬೆಚ್ಚಗಿನ ಬಟ್ಟೆಗಳನ್ನು ಧರಿಸಬೇಕು. ಹೊರ ಉಡುಪುಗಳು ಬಿಗಿಯಾಗಿ ನೇಯಲ್ಪಟ್ಟಿದ್ದು ನೀರು ನಿವಾರಕವಾಗಿರಬೇಕೆಂದು ಸೂಚಿಸಲಾಗಿದೆ.

ಒದ್ದೆಯಾದ ಬಟ್ಟೆಗಳಿಂದ ದೇಹದ ಉಷ್ಣತೆ ಕಳೆದುಹೋಗುವ ಸಾಧ್ಯತೆ ಇರುವುದರಿಂದ ಅವುಗಳನ್ನು ತಕ್ಷಣ ಬದಲಾಯಿಸಿಕೊಳ್ಳಬೇಕು. ಸೀಮೆಎಣ್ಣೆ, ಹೀಟರ್ ಅಥವಾ ಕಲ್ಲಿದ್ದಲು ಒಲೆ ಬಳಸುವ ವೇಳೆ ವಿಷಕಾರಿ ಹೊಗೆಯಿಂದ ರಕ್ಷಣೆಗಾಗಿ ಸಮರ್ಪಕ ಗಾಳಿ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ. ತಾಪಮಾನ ವ್ಯವಸ್ಥೆ ಲಭ್ಯವಿಲ್ಲದಿದ್ದಲ್ಲಿ ಆಡಳಿತದಿಂದ ಒದಗಿಸಲಾದ ಸಾರ್ವಜನಿಕ ತಾಪನ ಕೇಂದ್ರಗಳಿಗೆ ತೆರಳುವಂತೆ ಸಲಹೆ ನೀಡಲಾಗಿದೆ.

ದೇಹದ ಹೆಚ್ಚಿನ ಶಾಖ ತಲೆಯ ಮೇಲ್ಬಾಗದಿಂದ ಕಳೆದುಹೋಗುವುದರಿಂದ ತಲೆಯನ್ನು ಮುಚ್ಚಿಕೊಳ್ಳಬೇಕು. ಶ್ವಾಸಕೋಶದ ರಕ್ಷಣೆಗೆ ಬಾಯಿಯನ್ನು ಮುಚ್ಚಿಕೊಳ್ಳುವುದು ಅಗತ್ಯ. ಅತಿಯಾದ ಕೆಲಸ ಹಾಗೂ ಪರಿಶ್ರಮವನ್ನು ತಪ್ಪಿಸಬೇಕು. ಅತಿಯಾದ ಶ್ರಮ ಹೃದಯಾಘಾತಕ್ಕೆ ಕಾರಣವಾಗುವ ಸಾಧ್ಯತೆ ಇರುವುದಾಗಿ ಎಚ್ಚರಿಕೆ ನೀಡಲಾಗಿದೆ.

ದೇಹದ ಉಷ್ಣತೆ ಅತಿಯಾಗಿ ಕಡಿಮೆಯಾಗುವ ಲಘುಷತೆ (ಹೈಪೋಥರ್ಮಿಯಾ) ಲಕ್ಷಣಗಳ ಬಗ್ಗೆ ಸಾರ್ವಜನಿಕರು ಸದಾ ಎಚ್ಚರದಿಂದಿರಬೇಕು.

ಜಿಲ್ಲೆಯಾದ್ಯಂತ ಶೀತಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅಗತ್ಯವೆಂದು ಸೂಚಿಸಲಾಗಿದೆ.

ಇದೇ ಸಂದರ್ಭದಲ್ಲಿ ರಸ್ತೆ ಬದಿ, ಉದ್ಯಾನವನಗಳು ಹಾಗೂ ಬಸ್ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿವೇಳೆಯಲ್ಲಿ ಯಾರೂ ಮಲಗದಂತೆ ನಿಗಾವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶೀತಗಾಳಿಯಿಂದ ಯಾವುದೇ ಸಾವು ಅಥವಾ ಅಹಿತಕರ ಘಟನೆಗಳು ಸಂಭವಿಸದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಜರುಗಿಸಲು ಆದೇಶಿಸಲಾಗಿದೆ.

ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular