ಬೆಂಗಳೂರು : ಸಿಎಂ ಸ್ಥಾನದ ಅಧಿಕಾರ ಹಂಚಿಕೆ ವಿಚಾರ ಕ್ಲೈಮಾಕ್ಸ್ ಹಂತಕ್ಕೆ ಬರುತ್ತಿದೆ ಎನ್ನುವಾಗಲೇ ಸಿಎಂ, ಡಿಸಿಎಂ ಬಣಗಳಿಂದ ಅನಿರೀಕ್ಷಿತ ಬೆಳವಣಿಗೆಗಳು ಘಟಿಸುತ್ತಿವೆ. ಶತಾಯಗತಾಯ ಸಿಎಂ ಆಗಿಯೇ ತೀರುವ ಹಠಕ್ಕೆ ಬಿದ್ದಿರುವ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಆಪ್ತ ಬಳಗದ ಸಚಿವರನ್ನು ಭೇಟಿಯಾಗಿದ್ದಾರೆ.
ಎರಡೂವರೆ ವರ್ಷದ ಹಿಂದೆ ಸರ್ಕಾರ ರಚನೆ ವೇಳೆ ಆಗಿತ್ತೆನ್ನಲಾದ ಒಪ್ಪಂದದ ವಿವರಣೆ ನೀಡುವ ಮೂಲಕ ನಿರ್ಣಾಯಕ ಸಂದರ್ಭ ಎದುರಾದರೆ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಕೋರಿದ್ದಾರೆ. ಇದೆಲ್ಲದರ ನಡುವೆ ನಿರಂತರ ಹೈಕಮಾಂಡ್ ಸAಪರ್ಕದಲ್ಲಿರುವ ಡಿಕೆಶಿ ಅವರಿಗೆ ವೆಯ್ಟ್, ಐ ವಿಲ್ ಕಾಲ್ ಯೂ (ಸ್ವಲ್ಪ ಕಾಯಿರಿ ನಾನು
ಕರೆ ಮಾಡುತ್ತೇನೆ) ಎಂದು ಖುದ್ದು ರಾಹುಲ್‌ಗಾಂಧಿ ಅವರೇ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.
2 ಕಾರ್ಯಕ್ರಮಕ್ಕೆ ಸಿಎಂ ಗೈರು: ಕಾಂಗ್ರೆಸ್ ಪಕ್ಷದಲ್ಲಿನ ವಿದ್ಯಮಾನಗಳು ವಿಭಿನ್ನ ಸ್ವರೂಪ ಪಡೆದುಕೊಳ್ಳುತ್ತಿವೆ. ಮಂಗಳವಾರ ರಾಹುಲ್ ಅವರನ್ನು ಭೇಟಿಯಾಗಿ ಬಂದಿದ್ದ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಹಾಗೂ ಡಿಸಿಎಂಗೆ ರವಾನಿಸಿರುವ ಸಂದೇಶ ಹಲವು ಬೆಳವಣಿಗೆಗಳಿಗೆ ದಿಢೀರ್ ತಿರುವು ಕೊಟ್ಟಿದೆ. ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ಒಂದೆರೆಡು ದಿನಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಪ್ರಿಯಾಂಕ್ ಹೇಳಿದ್ದಾರೆ.
ಏತನ್ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಬುಧವಾರ ಕೆಪಿಸಿಸಿ ಕಚೇರಿಯಲ್ಲಿನ ಸಂವಿಧಾನ ದಿನಾಚರಣೆ ಸಮಾರಂಭ ಸೇರಿ ನಿಗದಿತ ಎರಡು ಕಾರ್ಯಕ್ರಮಗಳಿಗೆ ಗೈರಾಗಿರುವುದು ಗಮನಾರ್ಹವಾಗಿದೆ. ನಾಯಕತ್ವ ಬದಲಾವಣೆ ಸಂಬAಧ ಯಾವುದೇ ನಾಯಕರು ನೇರವಾಗಿ ಮಾತನಾಡದೆ, ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಪುನರುಚ್ಚರಿಸುತ್ತಿರುವುದು ಕ್ಲೈಮಾಕ್ಸ್ ಹಂತದ ಸುಳಿವು ಎಂದೇ ವಿಶ್ಲೇಷಿಸಲಾಗುತ್ತಿದೆ.
ಸಿಎಂ ಆಪ್ತ ಸಚಿವರನ್ನು ಭೇಟಿಯಾಗಿದ್ದ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಎರಡೂವರೆ ವರ್ಷಗಳ ಹಿಂದೆ ಸರ್ಕಾರ ರಚನೆ ವೇಳೆ ಆಗಿತ್ತೆನ್ನಲಾದ ಒಪ್ಪಂದದ ಬಗ್ಗೆ ವಿವರಿಸಿದ್ದಾರೆ. ಅಂದಿನ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ವರಿಷ್ಠರಾದ ಕೆ.ಸಿ.ವೇಣುಗೋಪಾಲ್,ರಣದೀಪ್ ಸುರ್ಜೆವಾಲಾ, ಸಿದ್ದರಾಮಯ್ಯ, ನಾನು ಹಾಗೂ ಸೋದರ ಡಿ.ಕೆ.ಸುರೇಶ್ ಪಾಲ್ಗೊಂಡಿದ್ದೆವು. ಎರಡೂವರೆ ವರ್ಷದ ಬಳಿಕ ಸಿಎಂ ಸ್ಥಾನದ ಅಧಿಕಾರ ಹಂಚಿಕೆ ತೀರ್ಮಾನವಾಗಿತ್ತೆAದು ಮನವರಿಕೆ ಮಾಡಿಕೊಟ್ಟಿದ್ದಾರೆಂದು ಹೇಳಲಾಗಿದೆ. ಈವರೆಗೆ ಈ ಬಗ್ಗೆ ಯಾವುದೇ ತೀರ್ಮಾನ ಹೊರಬೀಳದ ಹಿನ್ನೆಲೆಯಲ್ಲಿ ನಾನೇ ಪ್ರಸ್ತಾಪ ಮಾಡಬೇಕಾಯಿತೆಂದು ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಬುಧವಾರ ಶಾಸಕರ ಭವನದಲ್ಲಿ ಮೊದಲು ಸಭೆ ನಡೆಸಿದ್ದಾರೆ. ಬಳಿಕ ಶಾಸಕರನ್ನು ಊಟಕ್ಕೆಂದು ಬೆಂಗಳೂರಿನ ಖಾಸಗಿ ಹೋಟೆಲ್‌ಗೆ ಕರೆದೊಯ್ದು ಮಹತ್ವದ ಚರ್ಚೆ ಮಾಡಿದ್ದಾರೆ. ಶಾಸಕರಾದ ಆಸೀಫ್ ಸೇಠ್, ಕಂಪ್ಲಿ ಗಣೇಶ್, ವಿಶ್ವಾಸ್ ವೈದ್ಯ, ಬಾಬಾಸಾಹೇಬ್ ಪಾಟೀಲ್, ಯಾಸೀರ್ ಖಾನ್ ಪಠಾಣ್, ಪ್ರಕಾಶ್ ಕೋಳಿವಾಡ, ಪಾವಗಡ ವೆಂಕಟೇಶ್, ಹಂಪಯ್ಯ ನಾಯಕ್ ಭಾಗಿಯಾಗಿದ್ದು ಸತೀಶ್ ಜಾರಕಿಹೊಳಿ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಡಿ.ಕೆ ಶಿವಕುಮಾರ್ ಭೇಟಿ ಬೆನ್ನಲ್ಲೇ ಸತೀಶ್ ಶಾಸಕರ ಸಭೆ ನಡೆಸಿದ್ದರ ಗುಟ್ಟೇನು ಎಂಬ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ.


