ಪಟ್ಟಣತ್ತಿಟ್ಟಂ : ಕೇರಳದ ಪ್ರಸಿದ್ಧ ಶಬರಿ ಮಲೆ ದೇವಸ್ಥಾನದಲ್ಲಿ ವಾರ್ಷಿಕ ಮಂಡಲ ಪೂಜೆ ಆರಂಭವಾಗಿದ್ದು, ಕಳೆದ 48 ಗಂಟೆಗಳಲ್ಲಿ ಅಂದಾಜಿಗೂ ಮೀರಿದಂತೆ ಎರಡು ಲಕ್ಷಕ್ಕೂ ಅಧಿಕ ಭಕ್ತರು ದರ್ಶನಕ್ಕೆ ಆಗಮಿಸಿದ್ದರಿಂದ ಗದ್ದಲ ನಿಯಂತ್ರಿಸಲಾಗದೆ ಪೊಲೀಸರು ಪರದಾಡುವಂತಾಗಿದೆ. ಸದ್ಯಕ್ಕೆ ಯಾರೂ ಬರಬೇಡಿ ಎಂದು ದೇಗುಲ ಮಂಡಳಿ ಮನವಿ ಮಾಡಿಕೊಂಡಿದೆ.
ದೇವಸ್ಥಾನದ ಆವರಣದಲ್ಲಿರುವ ಭಾರೀ ಜನ ಜಮಾವಣೆಯಾದ ಹಿನ್ನೆಲೆ ಹಲವರಿಗೆ ಉಸಿರಾಟ ತೊಂದರೆ ಉಂಟಾಗಿದೆ. ಸರತಿಸಾಲಿನಲ್ಲಿ ನಿಂತ ಭಕ್ತರಿಗೆ ಕುಡಿಯಲು ನೀರು ಸಿಗದಂತೆ ಪರದಾಡಿದ್ದಾರೆ. ಈ ಬಗ್ಗೆ ದೂರು ಬಂದ ಕೂಡಲೇ ಪರಿಸ್ಥಿತಿ ನಿಯಂತ್ರಿಸಲು ಸೂಚಿಸಲಾಗಿದೆ. ದೇವಸ್ಥಾನದ ಮಂಡಳಿ ಇದಕ್ಕಾಗಿ ಶ್ರಮಿಸುತ್ತಿದೆ.
ಹಾಗೂ ಭಕ್ತರಿಗೆ ಕುಡಿಯುವ ನೀರು ವಿತರಿಸಲು ಹೆಚ್ಚುವರಿ 200 ಜನರನ್ನು ನಿಯಂತ್ರಿಸಲಾಗಿದೆ. ನಾನು ಇದುವರೆಗೂ ಈ ಪ್ರಮಾಣದ ಜನಸಂದಣಿ ನೋಡಿರಲಿಲ್ಲ. ಕೆಲ ಭಕ್ತರು ಮುಂದೆಬರಲು ಸರತಿ ಸಾಲು ತಪ್ಪಿಸುತ್ತಿರುವ ಕಂಡುಬರುತ್ತಿದೆ. ಈ ಹಿನ್ನೆಲೆ ಪೊಲೀಸರಿಗೆ ನಿರ್ದೇಶಿಲಾಗಿದೆ ಎಂದು ಟ್ರಾವಂಕೂರ್ ದೇವಸ್ವA ಬೋರ್ಡ್ ಅಧ್ಯಕ್ಷ ಕೆ.ಜಯಕುಮಾರ್ ತಿಳಿಸಿದ್ದಾರೆ.
ಕಳೆದ ವರ್ಷ ನಾಲ್ಕು ದಿನಗಳ ಅವಧಿಯಲ್ಲಿ 1 ಲಕ್ಷ ಭಕ್ತರು ಆಗಮಿಸಿ ದರ್ಶನ ಪಡೆದಿದ್ದು. ಆದರೆ ಈ ವರ್ಷದ ಮಂಡಲ ಪೂಜೆಗೆ ಕೇವಲ ೨ ದಿನಗಳಲ್ಲಿ ೨ ಲಕ್ಷಕ್ಕೂ ಅಧಿಕ ಜನರು ಆಗಮಿಸಿದ್ದರಿಂದ ಭಾರೀ ಜನದಟ್ಟಣೆ ಉಂಟಾಗಿದೆ ಎಂದು ಎಡಿಜಿಪಿ ಎಸ್.ಶ್ರೀಜಿತ್ ತಿಳಿಸಿದ್ದಾರೆ. ಶಬರಿಮಲೆ ದೇವಸ್ಥಾನದ ಅವ್ಯವಸ್ಥೆ ಕುರಿತು ವಿಪಕ್ಷಗಳು ಕಿಡಿಕಾರಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ವಿ.ಡಿ.ಸತೀಸನ್, ಭಕ್ತರಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೆದುಳು ತಿನ್ನುವ ಅಮೀಬಾ: ಎಚ್ಚರಿಕೆ
ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿನ ಬಗ್ಗೆ ಅಲ್ಲಿನ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ನದಿ ಸ್ನಾನ ಮಾಡುವಾಗ ಮೂಗಿಗೆ ನೀರು ಸೋಕದಂತೆ ನಿಗಾ ವಹಿಸಲು ಸೂಚಿಸಲಾಗಿದೆ. ಭಕ್ತರು ಅಗತ್ಯ ಔಷಧ ತರಬೇಕು ಮುಂತಾದ ಸಲಹೆ ನೀಡಿದೆ.


