ಬೆಂಗಳೂರು : ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಇದೀಗ ರಾಜ್ಯದ ಯಜಮಾನಿಯರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಗೃಹ ಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆಗೆ ರಾಜ್ಯ ಸರ್ಕಾರವು ಅನುಮತಿ ನೀಡಿದೆ.
ಷೇರು ಸಂಗ್ರಹಣೆ ಮಾಡುವ ಉದ್ದೇಶ ದಿಂದ ಗೃಹಲಕ್ಷಿö್ಮ ಯೋಜನೆ ಅಡಿಯಲ್ಲಿ ಸಹಕಾರ ಸಂಘ ಸ್ಥಾಪನೆಗೆ ಸಹಕಾರ ಇಲಾಖೆಯು ಅನುಮತಿ ನೀಡಿದೆ. ಈ ಸಹಕಾರ ಸಂಘ ಸ್ಥಾಪನೆಯಿಂದ ರಾಜ್ಯದ ಮಹಿಳೆಯರಿಗೆ ಹೆಚ್ಚಿನ ಅನುಕೂಲಗಳು ಆಗಲಿವೆ ಎಂದು ಹೇಳಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಸಹಕಾರ ಸಂಘ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾ ಗಿದ್ದು, ಶೀಘ್ರದಲ್ಲೇ ಇದು ಜಾರಿಗೆ ಬರುವ ಸಾಧ್ಯತೆ ಇದೆ.
ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆಗೆ ಸಹಕಾರ ಸಂಘಗಳ ಅಪರ ನಿಬಂಧಕರು ಹಸಿರು ನಿಶಾನೆ ತೋರಿಸಿದ್ದು, ಕರ್ನಾಟಕದ ವ್ಯಾಪ್ತಿಯನ್ನು ನಿಗದಿಪಡಿಸಿದ್ದಾರೆ. ನೋಂದಣಿಗೆ ಮುನ್ನ, ಸಹಕಾರ ಸಂಘದ ಕಾರ್ಯವ್ಯಾಪ್ತಿಯಲ್ಲಿ ಕನಿಷ್ಠ ಒಂದು ಸಾವಿರ ಸದಸ್ಯರಿಂದ 20 ಲಕ್ಷ ರೂ. ಷೇರು ಹಣ ಸಂಗ್ರಹಿಸಲು ಮುಖ್ಯ ಪ್ರವರ್ತಕರಾದ ಬಿ.ವಿ. ನಾಗರತ್ನ ಅವರಿಗೆ 90 ದಿನಗಳ ಗಡುವನ್ನು ವಿಧಿಸಿ, ಷರತ್ತುಬದ್ಧ ಆದೇಶವನ್ನು ಹೊರಡಿಸಿದ್ದಾರೆ.
ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆಗಾಗಿ 21 ಗೃಹಲಕ್ಷ್ಮಿ ಫಲಾನುಭವಿಗಳನ್ನು ಪ್ರವರ್ತಕರೆಂದು ಪರಿಗಣಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಭೆ ನಡೆಸಿ, ಮುಖ್ಯ ಪ್ರವರ್ತಕರ ಮೂಲಕ ಯೋಜನೆಯ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಸಹಕಾರ ಸಂಘಗಳ ಸಹಾಯಕ ನಿರ್ದೇಶಕರು ಸ್ಥಳ ಪರಿಶೀಲನೆ ನಡೆಸಿ, ಸಂಘದ ಸಾಧಕ- ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.