ಪಟನಾ : ಬಿಹಾರದ 121 ಕ್ಷೇತ್ರಗಳ ಮೊದಲ ಹಂತದ ಚುನಾವಣೆಯ ನಾಮಪತ್ರ ಹಿಂಪಡೆಯಲು ಸೋಮವಾರ ಕಡೇ ದಿನ. ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಉಳಿದಿರುವುದು ನಾಲ್ಕೇ ದಿನ. ಆದರೂ ಪ್ರತಿಪಕ್ಷವಾದ ಮಹಾಗಠಬಂಧನದಲ್ಲಿ ಸ್ಥಾನ ಹಂಚಿಕೆ ಕಗ್ಗAಟಾಗಿಯೇ ಉಳಿದಿದೆ.
ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ 48 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಎರಡನೇ ಪಟ್ಟಿಯಲ್ಲಿ 8 ಹೆಸರುಗಳನ್ನು ಪ್ರಕಟಿಸಿದೆ. ಸಿಪಿಐಎಂಎಲ್ 14 ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಸುಮಾರು 10 ಕ್ಷೇತ್ರಗಳಲ್ಲಿ ಮಹಾಗಠಬಂಧನದ ಅಭ್ಯರ್ಥಿಗಳು ಪರಸ್ಪರ ಎದುರಿಸುವಂಥ ಪರಿಸ್ಥಿತಿ ಇದೆ. ವೈಶಾಲಿ, ತಾರಾಪುರ, ಕುಟುಂಬಾ ಕ್ಷೇತ್ರಗಳಲ್ಲಿ ಆರ್‌ಜೆಡಿ, ಕಾಂಗ್ರೆಸ್ ಮತ್ತು ವಿಐಪಿಗಳು ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿವೆ. ಬಚ್ವಾರಾ, ಲಾಲ್‌ಗಂಜ್, ರಾಜಪಕಾರ್, ವರ್ಸಲಿಗಂಜ್‌ಗಳಲ್ಲೂ ಇದೇ ಪರಿಸ್ಥಿತಿ. ಕಾಂಗ್ರೆಸ್ ಮೊದಲೇ ಅಭ್ಯರ್ಥಿಗಳನ್ನು ಪ್ರಕಟಿಸಿದ್ದ ಕ್ಷೇತ್ರಗಳಲ್ಲಿ ಆರ್‌ಜೆಡಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಇದು ಮೈತ್ರಿಕೂಟದಲ್ಲಿ ಒಡಕು ಮೂಡುವಂತೆ ಆಗಿದೆ. ಸಿಪಿಐ ಮತ್ತು ಕಾಂಗ್ರೆಸ್ ನಡುವೆ ಕೂಡ ಮುಖಾಮುಖಿ ಏರ್ಪಟ್ಟಿದೆ. ಪ್ರತಿ ಬಾರಿ ಸೀಟು ಹಂಚಿಕೆಯಲ್ಲಿ ಆರ್‌ಜೆಡಿ ಪ್ರಮುಖ ಪಾತ್ರ ವಹಿಸುತ್ತಿತ್ತು. ಈ ಬಾರಿ ನೆಲೆ ಕಡಿಮೆ ಇದ್ದರೂ, ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಿಗೆ ಪಟ್ಟು ಹಿಡಿದಿದೆ. ಅದರಂತೆ ವಿಐಪಿ ಕೂಡ ಹೆಚ್ಚಿನ ಸ್ಥಾನ ಕೇಳುತ್ತಿದೆ.
ಸೀಟು ಸಿಗದವರಿಂದ ಬಿಜೆಪಿ ಕಚೇರಿ ಎದುರು ಮೊದಲ ಒಂದೆರಡು ದಿನ ಪ್ರತಿಭಟನೆಗಳು ನಡೆದಿದ್ದವು. ನಂತರ ಅಲ್ಲಿ ಈಗ ಸಮರೋತ್ಸಾಹ ಕಂಡುಬರುತ್ತಿದೆ. ರಾಜ್ಯದಲ್ಲಿ ಶೇ.17.7 ರಷ್ಟಿರುವ ಮುಸ್ಲಿಮರಿಗೆ ಬಿಜೆಪಿ ಕಳೆದ ಬಾರಿಯಂತೆ ಈ ಬಾರಿಯೂ ಒಂದೂ ಸ್ಥಾನ ನೀಡಿಲ್ಲ. ಆದರೆ ಕಾರ್ಯಕರ್ತರ ಪಡೆಯೇ ಕಣಕ್ಕೆ ಧುಮುಕಿದೆ. ಜತೆಗೆ ಮೈತ್ರಿಯೂ ಸುಗಮವಾಗಿ ನಡೆದಿರುವುದರಿಂದ ಎಲ್ಲ ಎನ್‌ಡಿಎ ಅಂಗಪಕ್ಷಗಳೂ ಗೆಲುವಿನ ಕಡೆಗೆ ಗಮನ ಹರಿಸಿವೆ. ಎಲ್‌ಜೆಪಿ(ಆರ್‌ವಿ) 29 ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮಾಂಝಿ ನೇತೃತ್ವದ ಹಿಂದೂಸ್ಥಾನ್ ಆವಾಮಿ ಮೋರ್ಚಾ, ಕುಶ್ವಾಹಾ ನೇತೃತ್ವದ ಆರ್‌ಎಂಎA ಕೂಡ ತನ್ನ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿಸಿ ನಿರಾಳವಾಗಿ ಪ್ರಚಾರಕ್ಕೆ ಧುಮುಕಿದೆ. ಈಗಾಗಲೇ ಕೇಂದ್ರ ಗೃಹಸಚಿವ ಅಮಿತ್ ಶಾ ಬಿಹಾರಕ್ಕೆ ಭೇಟಿ ನೀಡಿದ್ದ ತಮ್ಮ ಪ್ರಚಾರ ಸಭೆಯನ್ನು ನಡೆಸಿ ಕಾರ್ಯಕರ್ತರಿಗೆ ಉತ್ಸಾಹ ತುಂಬಿದ್ದಾರೆ..