ಮಂಗಳೂರು : “ಮಂಗಳೂರು ನಗರ, ದ.ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ದಾಖಲಾದ ಒಟ್ಟು 09 ವಂಚನೆ ಪ್ರಕರಣಗಳಲ್ಲಿ ಭಾಗಿಯಾದ ವಂಚಕಿಯನ್ನು ಠಾಣೆ ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ದೂರು ನೀಡಿದ ಜಯರಾಯ ರವರು ಮಂಗಳೂರು ನಗರದ ಎಂಪಾಯರ್ ಮಾಲ್ ನಲ್ಲಿ ಲ್ಯಾಪ್ ಟಾಪ್ ಬಜಾರ್ ಎಂಬ ಸ್ಟೋರ್ ಇಟ್ಟುಕೊಂಡಿದ್ದು ಎಲ್ಲಾ ಕಂಪನಿಗಳ ಲ್ಯಾಪ್ ಟಾಪ್ ಗಳನ್ನು ಸೇಲ್ಸ್ ಮತ್ತು ಸರ್ವೀಸ್ ಮಾಡಿಕೊಂಡಿದ್ದರು.ಈ ಶಾಪ್ ನಿಂದ 1). ಆಪಲ್ ಕಂಪನಿಯ Macbook pro A2141 ಲ್ಯಾಪ್ ಟಾಪ್ 2). ಡೆಲ್ ಕಂಪನಿಯ Dell 5440/Core i5-13/16GB ಲ್ಯಾಪ್ ಟಾಪ್ ಮತ್ತು 3). ಆಪಲ್ ಕಂಪನಿಯ Macbook pro 2442 2021 M1 PRO ಲ್ಯಾಪ್ ಟಾಪ್ ನ್ನು ಆರೋಪಿತೆ ಫರಿಧಾ ಬೇಗಂ ತನ್ನ ಪರಿಚಯದ ವ್ಯಕ್ತಿಯ ಮೂಲಕ ಮಾನ್ಯತೆ ಇಲ್ಲದ ಚೆಕ್ ಗಳನ್ನು ನೀಡಿ ಲ್ಯಾಪ್ ಟಾಪ್ ಗಳನ್ನು ಖರೀದಿಸಿಕೊಂಡು ದೂರುದಾರರಿಗೆ ಒಟ್ಟು ರೂ 1,98,000/- ರೂಪಾಯಿಯ ಹಣವನ್ನು ಪಾವತಿಸದೇ ಮೋಸ ಮಾಡಿದ್ದರು.
ಬರ್ಕೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮೋಹನ ಕೊಟ್ಟಾರಿರವರ ನೇತೃತ್ವದಲ್ಲಿ ಪ್ರಕರಣದ ತನಿಖಾಧಿಕಾರಿ ವಿನಾಯಕ ತೊರಗಲ್ ಮತ್ತು ಮಹಿಳಾ ಸಿಬ್ಬಂದಿಗಳ ಮೂಲಕ ಪತ್ತೆ ಆರೋಪಿತಳಾದ ಫರಿದಾ ಬೇಗಂರನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿತಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶಹೊರಡಿಸಿದೆ.
ಆರೋಪಿತಳು ಫರಿಧಾ ಬೇಗಂ ಪ್ರತಿಷ್ಠಿತ ಚಿನ್ನಾಭರಣಗಳ ಹಾಗೂ ಎಲೆಕ್ಟ್ರಾನಿಕ್ ಅಂಗಡಿಗಳಿಗೆ ಭೇಟಿ ಮಾಡಿ ತನ್ನ ಮಾತುಗಳಿಂದ ಅಂಗಡಿ ಮಾಲಕರನ್ನು ನಂಬಿಸಿ, ವಿವಿಧ ಬ್ಯಾಂಕ್ ಗಳ ಮಾನ್ಯತೆ ಇಲ್ಲದ ಚೆಕ್ ಗಳನ್ನು ನೀಡಿ ಬೆಲೆಬಾಳುವ ಸೊತ್ತುಗಳನ್ನು ಖರೀದಿಸಿ ಮೋಸಗೊಳಿಸಿದ್ದು ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವಲ್ಲದೆ ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆ, ಬಜಪೆ ಪೊಲೀಸ್ ಠಾಣೆ, ಮೂಡಬಿದ್ರೆ ಪೊಲೀಸ್ ಠಾಣೆ, ಮುಲ್ಕಿ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಮೋಸ, ವಂಚನೆಯ ಪ್ರಕರಣಗಳು ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 03 ಪ್ರಕರಣಗಳು ಹಾಗೂ ಉಡುಪಿ ಜಿಲ್ಲೆಯ ಶಿರ್ವ ಪೊಲೀಸ್ ಠಾಣೆಯಲ್ಲಿ ಒಂದು ಮೋಸ ವಂಚನೆಯ ಪ್ರಕರಣವು ದಾಖಲಾಗಿದೆ. ಅಲ್ಲದೇ ಆರೋಪಿತಳು ಮುಲ್ಕಿ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಮಾನ್ಯ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ನ್ಯಾಯಾಲಯವು ಆರೋಪಿತಳ ವಿರುದ್ದ ವಾರೆಂಟ್ ನ್ನು ಕೂಡಾ ಹೊರಡಿಸಿದೆ. ಹಾಗೂ ಕಾವೂರು ಮತ್ತು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ದಸ್ತಗಿರಿಯಾಗದೆ ತಲೆಮರೆಸಿಕೊಂಡಿದ್ದಳು.