ನವದೆಹಲಿ : ಹಸಿರು ಹೈಡ್ರೋಜನ್ ಸಂಶೋಧನೆ ಮತ್ತು ಅಭಿವೃದ್ಧಿನಿರತ ನವೋದ್ಯಮಗಳಿಗೆ ಕೇಂದ್ರ ಸರ್ಕಾರ ಒಟ್ಟಾರೆ 100 ಕೋಟಿ ರೂ. ಆರ್ಥಿಕ ನೆರವು ನೀಡಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ನವದೆಹಲಿಯಲ್ಲಿ ಶುಕ್ರವಾರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿದ್ದ ಮೊದಲ ವಾರ್ಷಿಕ ಹಸಿರು ಹೈಡ್ರೋಜನ್
ಸಂಶೋಧನೆ ಮತ್ತು ಅಭಿವೃದ್ಧಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ನವೋದ್ಯಮಗಳ ಪ್ರತಿ ಯೋಜನೆಗೆ ಗರಿಷ್ಠ 5 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದರು.
ಹಸಿರು ಹೈಡ್ರೋಜನ್ ನಾವೀನ್ಯತೆಯಲ್ಲಿ ನವೋದ್ಯಮಗಳನ್ನು ಬೆಂಬಲಿಸಲು 100 ಕೋಟಿ ರೂ. ಆರ್ಥಿಕ ನೆರವಿಗೆ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
ನವೀನ ಜಲಜನಕ ಉತ್ಪಾದನೆ, ಸಂಗ್ರಹಣೆ, ಸಾರಿಗೆ ಮತ್ತು ಬಳಕೆಯಲ್ಲಿ ತಂತ್ರಜ್ಞಾನ ಅಳವಡಿಕೆಯ ಪ್ರತಿ ಯೋಜನೆಗೆ 5 ಕೋಟಿ ರೂ.ವರೆಗೆ ಒದಗಿಸುತ್ತದೆ. ಎಲೆಕ್ಟ್ರೋಲೈಜರ್ ಉತ್ಪಾದನೆಯಿಂದ ಹಿಡಿದು ಎಐಚಾಲಿತ ೨೫ ನವೋದ್ಯಮಗಳು ನಾವೀನ್ಯತೆ ಪ್ರದರ್ಶಿಸುತ್ತಿವೆ ಎಂದರು.
ರಸಗೊಬ್ಬರಗಳಲ್ಲಿ ಭಾರತ ಮೊದಲ ಹಸಿರು ಅಮೋನಿಯಾ ಹರಾಜು ನಡೆಸಿದ್ದು, 2024ರಲ್ಲಿ ಪ್ರತಿ ಕೆಜಿಗೆ 100.28 ರೂ. ಇದ್ದರೆ, ಇದೀಗ ಪ್ರತಿ ಕೆಜಿಗೆ ಅದರ ಅರ್ಧದಷ್ಟು ಅಂದರೆ ಕೇವಲ 49.76 ರೂ.ಗಳ ಐತಿಹಾಸಿಕ ಕಡಿಮೆ ಬೆಲೆ ದಾಖಲಾಗಿದೆ. ಒಡಿಶಾದ ಪ್ಯಾರದೀಪ್ ಫಾಸ್ಫೇಟ್‌ಗಳಲ್ಲಿ ಸರಬರಾಜು ಪ್ರಾರಂಭವಾಗಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ 2023ರಲ್ಲಿ 19,744 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ (ಎನ್‌ಜಿಎಚ್‌ಎಂ) ಪ್ರಾರಂಭಿಸಿದ ಮೇಲೆ ಭಾರತ ಹಸಿರು ಹೈಡ್ರೋಜನ್‌ಗಾಗಿ ಜಾಗತಿಕ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಿದೆ. ಹಸಿರು ಅಮೋನಿಯಾ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತಂತೆ ಮೊದಲ ಸುತ್ತಿನಲ್ಲೇ 23 ಯೋಜನೆಗಳನ್ನು ನೀಡಿದ್ದು, ಐಐಟಿ, ಐಐಎಆರ್, ಸಿಎಎಸ್‌ಇಆರ್ ಪ್ರಯೋಗಾಲಯ ಮತ್ತು ಕೈಗಾರಿಕಾ ಪಾಲುದಾರರು ಈ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ ಎಂದರು. ಇಲಾಖೆ ಕಾರ್ಯದರ್ಶಿ ಸಂತೋಷ್ ಕುಮಾರ್ ಸಾರಂಗಿ ಮಾತನಾಡಿ, ಹಸಿರು ಹೈಡ್ರೋಜನ್ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮ 4೦೦ ಕೋಟಿ ರೂ. ಬಜೆಟ್ ವೆಚ್ಚ ಹೊಂದಿದ್ದು, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಚಾಲನೆ ಬೆಂಬಲಿಸಲು ಒಓಖಇ ಸಿದ್ಧವಾಗಿದೆ ಎಂದರು.
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ನಿರ್ದೇಶಕ ಡಾ.ಅಭಯ್ ಭಾಕ್ರೆ, ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಅಜಯ್ ಕುಮಾರ್
ಸೂದ್ ಮತ್ತಿತರರು ಉಪಸ್ಥಿತರಿದ್ದರು.


