ಬೆಂಗಳೂರು : ಧರ್ಮಸ್ಥಳದಲ್ಲಿ ಹೆಣ ಹೂತಿರುವ ಪ್ರಕರಣದ ಬಗ್ಗೆ ನಡೆದಿರುವ ಎಸ್‌ಐಟಿ ತನಿಖೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ ಏಟು-ಎದಿರೇಟಿಗೂ ಕಾರಣವಾಗಿದೆ. ಧರ್ಮಸ್ಥಳ ವಿಚಾರ ಈಗ ಎರಡೂ ಪಕ್ಷಗಳ ನಾಯಕರುಗಳ ನಡುವೆ ಕೆಸರೆರಚಾಟಕ್ಕೂ ಕಾರಣವಾಗಿದೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಬಿಜೆಪಿ ನಾಯಕರು ದಂಡು ಧರ್ಮಸ್ಥಳಕ್ಕೆ ತೆರಳಿ ಅಲ್ಲಿ ಸಂಕಲ್ಪ ಪೂಜೆ ನಡೆಸಿದ್ದರೆ, ಕಾಂಗ್ರೆಸ್ ಧರ್ಮಸ್ಥಳ
ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ದೂರಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಧರ್ಮಸ್ಥಳ ಬಿಜೆಪಿಯ ಸ್ವತ್ತಲ್ಲ ಅದು ನಾಸ್ತಿಕರಿಗೆ ಸೇರಿದ್ದು ಎಂದು ಬಿಜೆಪಿಯ ಧರ್ಮಸ್ಥಳ ಚಲೋಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಧರ್ಮಸ್ಥಳದ ಬಗ್ಗೆ ನಾಳೆ ಸದನದಲ್ಲಿ ಗೃಹ ಸಚಿವರು ವಿವರ ನೀಡುವರು. ನಾನು ಧರ್ಮಸ್ಥಳದ ಭಕ್ತನಾಗಿ ನನ್ನ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ ಅಷ್ಟೆ. ಆದರೆ, ಬಿಜೆಪಿಯವರು ಧರ್ಮಸ್ಥಳದ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹರಿಹಾಯ್ದರು.
ನಾವು ಧರ್ಮಸ್ಥಳದ ಮೇಲೆ ಬಂದಿರುವ ಆರೋಪಗಳಿಗೆ ಮುಕ್ತಿ ಸಿಗಲಿ. ಅದು ಸತ್ಯನಾ ಅಥವಾ ಸುಳ್ಳಾ ಅನ್ನೊದು ಜನಕ್ಕೆ ಗೊತ್ತಾಗಲಿ ಎಂದು ಎಸ್‌ಐಟಿ ರಚನೆ ಮಾಡಿದ್ದೇವೆ. ಅದರಲ್ಲಿ ಈಗ ಏನೂ ಸಿಕ್ಕಿಲ್ಲ ಅಂತ ಗೊತ್ತಾದ ಮೇಲೆ ಬಿಜೆಪಿಗರು ಧರ್ಮಸ್ಥಳದ ಪರವಾಗಿ ರ‍್ಯಾಲಿ ಮಾಡುತ್ತಿದ್ದಾರೆ. ಇಷ್ಟು ದಿನ ರ‍್ಯಾಲಿ ಏಕೆ ಮಾಡಲಿಲ್ಲ. ಎಸ್‌ಐಟಿ ರಚನೆಯಾದಾಗ ಏಕೆ ಅವರು ಮಾತನಾಡಲಿಲ್ಲ. ಈಗ ರಾಜಕೀಯ ಮಾಡೋಕೆ ಬಂದಿದ್ದಾರೆ. ಇದು ಧರ್ಮಸ್ಥಳ ಪರ ರ‍್ಯಾಲಿ ಅನ್ನೋದಕ್ಕಿಂತ ಬಿಜೆಪಿಯ ರಾಜಕೀಯರ‍್ಯಾಲಿ ಎನ್ನಬಹುದು ಎಂದು ಡಿಕೆ ಶಿವಕುಮಾರ್ ಟೀಕಿಸಿದರು.
ಕ್ಷಮೆಗೆ ಆಗ್ರಹ
ಧರ್ಮಸ್ಥಳಕ್ಕೆ ಇಂದು ಬಿಜೆಪಿಯ ಶಾಸಕರು ಹಾಗೂ ಮುಖಂಡರ ಜತೆ ಭೇಟಿ ನೀಡಿ ಮಂಜುನಾಥಸ್ವಾಮಿಯ ದರ್ಶನ ಪಡೆದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯನ್ನು ಭೇಟಿ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಧರ್ಮಸ್ಥಳದ ವಿಚಾರದಲ್ಲಿ ನಿರಂತರ ಅಪಪ್ರಚಾರ ನಡೆಯುತ್ತಿದೆ.ಅವುಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ಬಿಜೆಪಿ ಧರ್ಮಸ್ಥಳದ ವಿಚಾರದಲ್ಲಿ ರಾಜಕಾರಣ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ದೇವರು ಅಣ್ಣಪ್ಪಸ್ವಾಮಿಯ ಬಗ್ಗೆ ಅಪಪ್ರಚಾರ ಮಾಡಿ ಅಸಂಖ್ಯಾತ ಭಕ್ತರಲ್ಲಿ ಗೊಂದಲ ಸೃಷ್ಟಿಸುವ ಷಡ್ಯಂತ್ರವೂ ನಡೆದಿದೆ ಎಂದರು.