ಬೆಂಗಳೂರು : ಕಳೆದ 19ದಿನಗಳಿಂದ ಧರ್ಮಸ್ಥಳದಲ್ಲಿ ಮುಸುಕು ಧಾರಿ ಹೇಳಿದಂತೆ ಹತ್ತಾರು ಕಡೆ ಭೂಮಿ ಅಗೆದರೂ ಏನೂ ಸಿಗದಿರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಎನ್ನುವ ಪ್ರತಿಪಕ್ಷಗಳ ಅಬ್ಬರದ ಧ್ವನಿ ಹಾಗೂ ರಾಜ್ಯಾದ್ಯಂತ ಧರ್ಮಸ್ಥಳ ಪರವಾಗಿ ಎದ್ದಿರುವ ಜನಾಕ್ರೋಶಕ್ಕೆ ಸರ್ಕಾರ ಮಣಿದಂತೆ ಕಾಣುತ್ತಿದ್ದು, ಎಸ್‌ಐಟಿ ತನಿಖೆಗೆ ಸೋಮವಾರ ಇತಿಶ್ರೀ ಹಾಡಿ ಎಳ್ಳುನೀರು ಬಿಡುವ ಸಾಧ್ಯತೆ ಇದೆ.
ಈ ಬಗ್ಗೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅಥವಾ ಗೃಹ ಸಚಿವ ಜಿ.ಪರ ಮೇಶ್ವರ್ ಘೋಷಣೆ ಮಾಡಬಹುದು. ಅಷ್ಟೇ ಅಲ್ಲದೆ, ಅಪಪ್ರಚಾರ ಮಾಡಿದವರ ಮೇಲೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದ್ದು,ಸುಳ್ಳು ಮಾಹಿತಿ ನೀಡಿದ್ದರೆ ನಿರ್ದಾಕ್ಷಿಣ್ಯ ಶಿಕ್ಷೆ ಖಚಿತ ಎನ್ನುವ ಮೂಲಕ ಮಾಸ್ಕ್ಮ್ಯಾನ್ ವಿರುದ್ಧವೂ ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
18 ದಿನಗಳ ಬಳಿಕ ಎಚ್ಚೆತ್ತ ಸರ್ಕಾರ: ಯಾವುದೇ ಒತ್ತಡಕ್ಕೆ ಮಣಿದು ಎಸ್‌ಐಟಿ ರಚಿಸಿಲ್ಲ ಎಂದು ವಿಧಾನಸಭೆಯಲ್ಲಿ ಗೃಹಸಚಿವರು ಸ್ಪಷ್ಟಪಡಿಸಿದ್ದಾರೆ. ಯಾರೂ ಎಸ್‌ಐಟಿ ಅಥವಾ ಸರ್ಕಾರವನ್ನು ದಾರಿತಪ್ಪಿಸಲು ಸಾಧ್ಯವಿಲ್ಲ. ಸತ್ಯಶೋಧನೆಗಾಗಿ ತನಿಖೆ ನಡೆದಿದೆ ಎಂದೂ ಪರಮೇಶ್ವರ್ ಪುನರುಚ್ಚರಿಸಿದ್ದಾರೆ. ಆದರೆ ಇದು 18 ದಿನಗಳ ಎಸ್‌ಐಟಿ ತನಿಖೆಯಲ್ಲಿ ಯಾವುದೇ ಸಕಾರಾತ್ಮಕ ಫಲಿತಾಂಶ ದೊರೆಯದ ಬಳಿಕ ನೀಡಿದ ಹೇಳಿಕೆ. ಸದನದಲ್ಲಿ ಪ್ರತಿಪಕ್ಷಗಳ ಶಾಸಕರು ನಿಲುವಳಿ ಸೂಚನೆ ಮೇಲೆ ಧರ್ಮಸ್ಥಳ ವಿಚಾರದ ಬಗ್ಗೆ ಸಾಮೂಹಿಕವಾಗಿಯೇ ಪ್ರಬಲ ಧ್ವನಿ ಎತ್ತಿದ್ದು ಹಾಗೂ ರಾಜ್ಯದ ಹಲವೆಡೆ ಜನರು ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ಸಿಲ್ಲಿಸುವಂತೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿರುವುದೇ ಪ್ರಮುಖ ಕಾರಣ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಧರ್ಮಸ್ಥಳ ಕ್ಷೇತ್ರದ ಪ್ರಭಾವ, ಭಕ್ತಕೋಟಿಯ ನಂಬಿಕೆ ಜೊತೆಗೆ ಅಪಪ್ರಚಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತಗೊಳ್ಳುತ್ತಿರುವುದನ್ನು ಅರಿತ ಪಕ್ಷದ ಹೈಕಮಾಂಡ್ ಸರ್ಕಾರ ಹಾಗೂ ಖುದ್ದು ಮಂತ್ರಿಗಳಿಗೆ ಅಗತ್ಯ ರಕ್ಷಣಾತ್ಮಕ ಹೇಳಿಕೆಗೆ ಸಂದೇಶ ರವಾನಿಸಿದೆ.
ಆರೋಪ ಸುಳಾಗಿದ್ರೆ ಕಠಿಣ ಕ್ರಮ, ಸಿಎಂ ಹೇಳಿದಾರೆ: ಡಿಕೆಶಿ.
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಧರ್ಮಸ್ಥಳವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅಲ್ಲಿನ ಭಕ್ತಿ, ಶ್ರದ್ಧೆ ಪ್ರಕ್ರಿಯೆಗಳ ಮೇಲೆ ನನಗೆ ನಂಬಿಕೆ, ಆತ್ಮವಿಶ್ವಾಸವಿದೆ. ಸುಳ್ಳು ಆರೋಪ ಮಾಡಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ.