ಚಾಮರಾಜನಗರ : ಬಂಡೀಪುರದಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಹೋದ ಪ್ರವಾಸಿಗನನ್ನು ಕಾಡಾನೆಯೊಂದು ಅಟ್ಟಾಡಿಸಿ ತುಳಿದಿರುವ ಘಟನೆ ನಡೆದಿತ್ತು , ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದ್ದು . ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಪ್ರವಾಸಿಗನೊಬ್ಬ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಕಾಡಾನೆ ತುಳಿದು ಪ್ರಾಣಾಪಾಯದಿಂದ ಪಾರಾಗಿದ್ದನು.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆತನ ವಿರುದ್ಧ ಹಲವರು ಆಕ್ರೋಶ ಹೊರಹಾಕಿದ್ದು ಇದೀಗ ಅರಣ್ಯ ಇಲಾಖೆ ‘ಸೆಲ್ಪಿ’ ಕ್ಲಿಕ್ಕಿಸಿದ ಪ್ರವಾಸಿಗನಿಗೆ ಅರಣ್ಯ ಇಲಾಖೆ 25,000 ರೂ ದಂಡ ವಿಧಿಸಿದೆ.
ನಂಜನಗೂಡಿನ ಬಸವರಾಜು ಎಂಬುವವರು ಕಾಡಾನೆ ಜೊತೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಅಪಾಯಕ್ಕೆ ಸಿಲುಕಿದ್ದರು ಎಂದು ತಿಳಿದುಬಂದಿದೆ. ಆನೆ ಆತನನ್ನು ತುಳಿದಿದ್ದು ಅದೃಷ್ಟವಶಾತ್ ವ್ಯಕ್ತಿ ಪ್ರಾಣಪಾಯದಿಂದ ಪಾರಾಗಿದ್ದಾನೆ.ಘಟನೆ ಬಳಿಕ ಅರಣ್ಯ ಇಲಾಖೆ ಕಣ್ತಪ್ಪಿಸಿ, ಮೊಬೈಲ್ ಸ್ವಿಚ್ ಆಫ್ ಮಾಡಿ ಕೇರಳ ಕಡೆಗೆ ಹೋಗಿಬಂದಿದ್ದರು. ಆದರೆ, ನಂತರ ಅವರನ್ನು ಪತ್ತೆ ಮಾಡಿದ ಅರಣ್ಯ ಇಲಾಖೆ, 25 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೆ, ಅವರಿಂದಲೇ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ಸಾರುವ ವಿಡಿಯೋ ಮಾಡಿಸಿ ಬಿಡುಗಡೆ ಮಾಡಿಸಿದೆ.
ಈ ಬಗ್ಗೆ ಬಸವರಾಜು ವಿಡಿಯೋ ಸಂದೇಶ ಮೂಲಕ ಮಾಹಿತಿ ಹೇಳಿದ್ದು ‘ನಾನು ಬಂಕಾಪುರದ ದೇವಾಸ್ಥಾನಕ್ಕೆ ಹೋಗಿದ್ದೆ. ವಾಪಸ್ ಬರುವಾಗ ಮೋಜು ಮಸ್ತಿಗೆ ಕಾಡಾನೆ ಜತೆ ಸೆಲ್ಫೀ ತೆಗೆಯಲು ಮುಂದಾಗಿದ್ದೆ. ಈ ವೇಳೆ ನನ್ನ ಮೇಲೆ ಕಾಡಾನೆ ದಾಳಿ ನಡೆಸಿತು. ನನ್ನ ಪ್ರಾಣ ಉಳಿದಿದ್ದೇ ಹೆಚ್ಚು. ಯಾರು ಕೂಡ ಕಾಡು ಪ್ರಾಣಿಗಳ ಜೊತೆ ಚೆಲ್ಲಾಟ ಆಡಬೇಡಿ. ಇನ್ಮುಂದೆ ಯಾರೂ ಕೂಡ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸಬೇಡಿ, ಯಾರು ಕೂಡ ದುಸ್ಸಾಹಸಕ್ಕೆ ಕೈ ಹಾಕಬೇಡಿ. ನನ್ನ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಂಡು ದಂಡ ವಿಧಿಸಿದೆ. ಅದಕ್ಕಿಂತಲೂ ಜೀವ ಉಳಿದಿದ್ದು ಮುಖ್ಯ’ ಎಂದು ಹೇಳಿದ್ದಾರೆ.


